Saturday, August 22, 2009

243 ಅಲ್ಪಸಂಖ್ಯಾತ ಫಲಾನುಭವಿಗಳಿಗೆ 66ಲಕ್ಷ ರೂ. ವಿತರಣೆ


ಮಂಗಳೂರು,ಆ.22: ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವಾರು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತೀ 3 ತಿಂಗಳಿಗೊಮ್ಮೆ ಅರ್ಹ ಫಲಾನುಭವಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವಿವಿಧ ಸಾಲ ಯೋಜನೆಗಳಡಿ ಸಾಲ ಸೌಲಭ್ಯಗಳ ಚೆಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು, ಒಳನಾಡು,ಜಲಸಾರಿಗೆ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ತಿಳಿಸಿದರು.
ಅವರು ಇಂದು ಸುರತ್ಕಲ್ ನ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಲಾದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಜೆಟ್ ನಲ್ಲಿ ಇದಕ್ಕೆಂದೇ 172 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಮುಂದಿನ ತಿಂಗಳಲ್ಲಿ 900 ಫಲಾನುಭವಿಗಳಿಗೆ 2ಕೋಟಿ ರೂ. ಗಳ ಸೌಲಭ್ಯವನ್ನು ವಿತರಿಸಲಾಗುವುದು ಎಂದರು. ಇದರಲ್ಲೂ ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆಯನ್ನು ನೀಡಲು ನಿರ್ಧರಿಸಲಾಗಿದ್ದು, ಅವರ ಅನುಕೂಲಕ್ಕಾಗಿ, ಗ್ರಾಮ ಗ್ರಾಮಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈಜ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವುದೇ ತಮ್ಮ ಆದ್ಯ ಕರ್ತವ್ಯ ಎಂದ ಸಚಿವರು, ಕುಡಿಯುವ ನೀರು, ಕೃಷಿಗೆ ನೀರು ಹಾಗೂ ಮುಂದಿನ ಮೂರುವರೆ ವರ್ಷದ ಅವಧಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು. ಆರೋಗ್ಯಕರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣವೇ ಸರ್ಕಾರದ ಸಂಕಲ್ಪವಾಗಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಗೊಡದಿರುವಂತೆ ಸಲಹೆ ಮಾಡಿದರು.
ಸಮಾರಂಭದಲ್ಲಿ ಶ್ರಮಶಕ್ತಿ ಯೋಜನೆಯಡಿ 88 ಫಲಾನುಭವಿಗಳಿಗೆ 32.40 ಲಕ್ಷ ರೂ., ಕಿರುಸಾಲ ಯೋಜನೆಯಡಿ 94 ಸ್ವಸಹಾಯಸಂಘದ ಸದಸ್ಯರಿಗೆ 9.40 ಲಕ್ಷ ರೂ., ಸ್ವಾವಲಂಬನಾ ಯೋಜನೆಯಡಿ 47 ಫಲಾನುಭವಿಗಳಿಗೆ 4.46 ಲಕ್ಷ ರೂ., ಕ್ಲಸ್ಟರ್ ಯೋಜನೆಯಡಿ 4 ಫಲಾನುಭವಿಗಳಿಗೆ 9.74 ಲಕ್ಷ ರೂ., ಗಂಗಾಕಲ್ಯಾಣ ಯೋಜನೆಯಡಿ 10 ಫಲಾನುಭವಿಗಳಿಗೆ 10 ಲಕ್ಷ ರೂ., ಎರಡು ಇಂಡಿಕಾ ಕಾರು ಹಾಗೂ ಎರಡು ಆಟೋಗಳನ್ನು ವಿತರಿಸಲಾಯಿತು.ಸಮಾರಂಭದಲ್ಲಿ ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಬಿ. ಅಬೂಬಕ್ಕರ್ ಅವರು ಸರ್ಕಾರ ಅರ್ಹರಿಗೆ ಸವಲತ್ತುಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದು, ಯೋಜನೆಗಳ ಯಶಸ್ವೀ ಅನುಷ್ಠಾನವಾಗಿದೆ ಎಂದು ಸಂತಸವ್ಯಕ್ತಪಡಿಸಿದರು. ಬಡತನದಿಂದ ಸ್ವಾವಲಂಬನೆಯತ್ತ ಎಂಬ ಘೋಷವಾಕ್ಯದಡಿ ನಿಗಮವು ಅಲ್ಪಸಂಖ್ಯಾತರಿಗೋಸ್ಕರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಿದರು.
ವೇದಿಕೆಯಲ್ಲಿ ಜಗದೀಶ್ ಅಧಿಕಾರಿ ಹಾಗೂ ಉದ್ಯಮಿ ಕಡಂಬೋಡಿ ಮಾಧವ ಪೂಜಾರಿ ಉಪಸ್ಥಿತರಿದ್ದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೋಮಪ್ಪ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.