ಮಂಗಳೂರು,ಆ.17:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಕ್ಕೆ ಪ್ರಸಕ್ತ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ. ಸುಧಾಕರ ಅವರು ತಿಳಿಸಿದರು.
ಅವರು ಇಂದು ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿ ಅಭಿವೃದ್ಧಿಗೆ 100 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರ್ಕಾರ ನೀಡಿದ್ದು, ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅಭಿವೃದ್ಧಿಗೆ ಈ ವರ್ಷ 400 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ರಾಜ್ಯದಲ್ಲಿ 180 ಹೊಸ ಶಾಲೆಗಳನ್ನು ಆರಂಭಿಸಲಾಗಿದೆ. 172 ಸ್ಥಳಗಳಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ನುಡಿದರು. ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಮುಂದುವರಿಸಲಾಗುವುದೆಂದು ಹೇಳಿದ ಅವರು, ಇಲಾಖೆಯಲ್ಲಿ 9,000 ಹುದ್ದೆ ಖಾಲಿ ಇದ್ದು, 3000 ಹುದ್ದೆ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಪ್ರಗತಿಯಲ್ಲಿದೆ.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ಬಗ್ಗೆ ಅಧ್ಯಯನ ಮಾಡಿ ಶಿಫಾರಸ್ಸು ಮಾಡಲು ಆಯಾ ಪ್ರದೇಶದಲ್ಲಿ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಳೆದ ವರ್ಷ 10 ಕೋಟಿ ರೂ.ಅನುದಾನ ನೀಡಿದ್ದು, ಈ ವರ್ಷವೂ 10 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯ ಕೊರಗ ಜನಾಂಗದವರ ಕುಲಶಾಸ್ತ್ರ ಅಧ್ಯಯನ ನಡೆಸಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದೂ ಹೇಳಿದರು.