ಮಂಗಳೂರು,ಆ.20:ಜಿಲ್ಲೆಯ ಶಾಂತಿ,ಸುವ್ಯವಸ್ಥೆಗೆ ಧಕ್ಕೆ ತರುವ ಸಮಾಜ ಘಾತುಕ ಶಕ್ತಿಗಳ ದಮನಕ್ಕೆ ಪೊಲೀಸ್ ಇಲಾಖೆ ತನ್ನೆಲ್ಲಾ ಅಧಿಕಾರ ಹಾಗೂ ಶಕ್ತಿಯನ್ನು ಸಂಪೂರ್ಣವಾಗಿ ಬಳಸಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೋಪಾಲ್ ಹೊಸೂರ್ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಹಿರಿಯ ಪೋಲಿಸ್ ಅಧಿಕಾಗಳ ತುರ್ತು ಸಭೆ ನಡೆಯಿತು.ಸಭೆಯ ಬಳಿಕ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಐಜಿಪಿ ಯವರು ಮಾತನಾಡುತ್ತಿದ್ದರು. ಕಳೆದೊಂದು ವಾರದಿಂದ ಜಿಲ್ಲೆ ಯಲ್ಲಿ ನಡೆಯುತ್ತಿರುವ ಸಮಾಜವಿರೋಧಿ ಘಟನೆಗಳನ್ನು ಅವಲೋಕಿಸಿದಾಗ ಬೃಹತ್ ಷಡ್ಯಂತ್ರ ಕಾಣಿಸುತ್ತಿದ್ದು,ಮುಂಬರುವ ಹಬ್ಬದ ದಿನಗಳಲ್ಲಿ ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾಗದಂತೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈವರೆಗೆ ಜಿಲ್ಲೆಯ ಎಲ್ಲಾ ಸಮುದಾಯದ ಮುಖಂಡರು ಮತ್ತು ಜನರು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮತ್ತು ಯಾವುದೇ ಸಂಘರ್ಷಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸಹಕರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳು ಮಾತನಾಡಿ,ಜಿಲ್ಲೆಯಲ್ಲಿ ಸಹಜ ಪರಿಸ್ಥಿತಿಗೆ ಧಕ್ಕೆ ಬಾರದಿರಲು, ಸಾರ್ವಜನಿಕರು ಹಬ್ಬಗಳನ್ನು ಸಂಭ್ರಮದಿಂದ ಮತ್ತು ಶಾಂತಿಯುತವಾಗಿ ಆಚರಿಸಲು ಪೂರಕವಾಗಿ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ವಾಣಿಜ್ಯ ವ್ಯವಹಾರಗಳು ರಾತ್ರಿ 8 ಗಂಟೆಯೊಳಗೆ ಮುಗಿಸಲು ಆದೇಶ ನೀಡುವುದಾಗಿ ತಿಳಿಸಿದರು. ರಾತ್ರಿ ವೇಳೆಯಲ್ಲಿ ದುರ್ಘಟನೆಗಳು ಹೆಚ್ಚಾಗಿದ್ದು, ಇದನ್ನು ತಡೆಯಲು ಜಿಲ್ಲಾ ದಂಡಾಧಿಕಾರಿಗಳು ನಗರಕ್ಕೆ ಹೆಚ್ಚಿನ ಪೊಲೀಸ್ ಬಲವನ್ನು ಉಪಯೋಗಿಸಲು ನಿರ್ಧರಿಸಿರುವುದಾಗಿ ನುಡಿದರು. ಈ ಸಂಬಂಧ ನಾಳೆ ಶಾಂತಿ ಸಮಿತಿ ಸಭೆಯನ್ನೂ ಕರೆಯಲಾಗಿದ್ದು,ನಗರದಲ್ಲಿ ಖುದ್ದಾಗಿ ಐಜಿಪಿ, ಜಿಲ್ಲಾ ಪೊಲೀಸ್ ಅಧೀಕ್ಷಕರನ್ನೊಳಗೊಂಡಂತೆ 30 ವಾಹನಗಳು 24 ಗಂಟೆಯೂ ಗಸ್ತು ತಿರುಗಲಿದೆ. ನಾಕಾಬಂಧಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಅಗತ್ಯವಿದ್ದಲ್ಲಿ ಪ್ರಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದರು.ಮುಂಜಾಗ್ರತಾ ಕ್ರಮವಾಗಿ ಹಲವು ಕ್ರಿಮಿನಲ್ ಆರೋಪಿಗಳನ್ನು ಬಂಧಿಸಲಾಗಿದ್ದು,ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೋಲಿಸ್ ಪಡೆಯನ್ನು ನಿಯೋಜಿಸಲಾಗಿದೆ.ಹೆಚ್ಚುವರಿಯಾಗಿ 12 ಸಿ ಆರ್ ಪಿ ಮತ್ತು 1200 ಹೆಚ್ಚುವರಿ ಪೊಲೀಸರನ್ನು, ಅಗತ್ಯ ಬಿದ್ದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಬಲವನ್ನು ತರಿಸಲಾಗುವುದು. ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದರು.ಪತ್ರಿಕಾಗೋಷ್ಥಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಮಹಾನಗರಪಾಲಿಕೆ ಆಯುಕ್ತ ವಿಜಯ ಪ್ರಕಾಶ್ ಉಪಸ್ಥಿತರಿದ್ದರು.