Thursday, August 13, 2009

ದ.ಕ. ಜಿಲ್ಲೆಯಲ್ಲಿ ಎಚ್1 ಎನ್ 1 ನಿಯಂತ್ರಣದಲ್ಲಿ


ಮಂಗಳೂರು,ಆ.13:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್ 1 ಎನ್1 ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ರೋಗ ಹರಡುವುದನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹೊರದೇಶದಿಂದ ಬರುವಂತಹ ವಿದ್ಯಾರ್ಥಿಗಳಿಂದ ರೋಗ ಹಬ್ಬುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಂದ ರೋಗ ಹಬ್ಬದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದರು. ಇದುವರೆಗೆ ಜಿಲ್ಲೆಯಲ್ಲಿ 7 ಎಚ್ 1 ಎನ್1 ದೃಢೀಕರಿಸಲ್ಪಟ್ಟಿದ್ದು, ಇದರಲ್ಲಿ 5 ರೋಗ ಪೀಡಿತರು ಶುಶ್ರೂಷೆ ಪಡೆದು ಗುಣಮುಖರಾಗಿದ್ದಾರೆ. ಮೇ3ರಿಂದ ವಿಮಾನನಿಲ್ದಾಣದಲ್ಲಿ ಇದುವರೆಗೆ 38,000 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದರು. ರೋಗದ ಚಿಕಿತ್ಸೆಗೆ ಮತ್ತು ತಡೆಯದಂತೆ ಹರಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳ ಮುಖ್ಯಸ್ಥರಿಂದ ರೋಗ ತಡೆಗೆ ಸಲಹೆಗಳನ್ನು ಪಡೆಯಲಾಯಿತು.
ಹೊರರಾಜ್ಯಗಳಿಂದ ಮುಖ್ಯವಾಗಿ ಪುಣೆ, ಮುಂಬಯಿಯಿಂದ ಬರುವವರ ತಪಾಸಣೆಗೆ ಬಸ್ ಸ್ಟ್ಯಾಂಡ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ಘಟಕ ಆರಂಭಿಸುವುದಾಗಿಯೂ ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯ ಜನರಿಗೆ ನೆರವಾಗಲು 24 ಗಂಟೆ ಕರ್ತವ್ಯ ನಿರ್ವಹಿಸುವ ಹೆಲ್ಪ್ ಲೈನ್ ಆರಂಭಿಸುವ ಬಗ್ಗೆ ನಾಳೆಯೊಳಗೆ ಕ್ರಮಕೈಗೊಳ್ಳುವುದಾಗಿ ಡಿ ಸಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್,ಮಹಾನಗರಪಾಲಿಕೆ ಆಯುಕ್ತ ವಿಜಯಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪ್ರಭುದೇವ್ ಉಪಸ್ಥಿತರಿದ್ದರು.