ಮಂಗಳೂರು, ಜನವರಿ.18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013ನೆ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಥಮ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಜನವರಿ 20ರಂದು ನಡೆಯಲಿದೆ.ಜಿಲ್ಲೆಯಲ್ಲಿ 0-5ವರ್ಷದೊಳಗಿನ 163860 ಮಕ್ಕಳಿಗೆ ಲಸಿಕೆ ನೀಡುವ ಗುರಿಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 921ಲಸಿಕಾ ಕೇಂದ್ರಗಳು ಹಾಗು 11 ಸಂಚಾರಿ ತಂಡ ಮತ್ತು 27 ಟ್ರಾನ್ಸಿಟ್ ತಂಡ ರೂಪಿಸಲಾಗಿದೆ.ಮಕ್ಕಳಿಗೆ ಲಸಿಕೆ ನೀಡಲು 3822ಲಸಿಕೆ ನೀಡುವವರು ಹಾಗು 193 ಮೇಲ್ವಿಚಾರಕರನ್ನು ನೀಯೋಜಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.ಈ ಬಾರಿ 2319 ವಲಸೆ ಕಾರ್ಮಿಕರ ಮಕ್ಕಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ ಎಂದು ಪ್ರಕಾಶ್ ತಿಳಿಸಿದರು.ದೇಶದಲ್ಲಿ ಜನವರಿ 13, 2011 ರಲ್ಲಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಕಂಡುಬಂದ ಪ್ರಕರಣ ದೇಶದಲ್ಲಿ ಪತ್ತೆಯಾದ ಕೊನೆಯ ಪೋಲಿಯೋ ಪ್ರಕರಣವಾಗಿದ್ದು,ಜಿಲ್ಲೆಯಲ್ಲಿ 1999 ರಲ್ಲಿ ಕೊನೆಯ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು.ಈ ಬಾರಿ ಅಲೆಮಾರಿ ಮಕ್ಕಳು ಹಾಗು ನೈರ್ಮಲ್ಯದ ಕೊರತೆ ಇರುವ ಪ್ರದೇಶದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕುರಿತು ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್.ಶ್ರೀರಂಗಪ್ಪ ತಿಳಿಸಿದ್ದಾರೆ.
ಜನವರಿ 20 ರಂದು ಲಸಿಕೆ ನೀಡಿದ ಬಳಿಕ ನಗರ ಪ್ರದೇಶದಲ್ಲಿ ಮೂರು ದಿನ ಹಾಗು ಗ್ರಾಮೀಣ ಪ್ರದೇಶದಲ್ಲಿ ಎರಡು ದಿನ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ 598 ಆರೋಗ್ಯ ಸಿಬ್ಬಂದಿಗಳು,2092 ಆರೋಗ್ಯ ಕಾರ್ಯಕತರ್ೆಯರು,961ಆಶಾ ಕಾರ್ಯಕರ್ತೆಯರು,80 ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ರುಕ್ಮಿಣಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ,ಮನಪಾ ಆಯುಕ್ತ ಡಾ.ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು