ಮಂಗಳೂರು, ಜುಲೈ.04: ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ತೊಕ್ಕೊಟ್ಟು ನಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದ ಫ್ಲೈ ಓವರ್ ನ ಪರಿಷ್ಕೃತ ಯೋಜನೆ 300ಮೀಟರ್ ಅಗಲದಲ್ಲಿ ಐದು ಪಿಲ್ಲರ್ ಹಾಕಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಷ್ಕೃತ ಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್ ಅವರು ಉಪಸ್ಥಿತರಿದ್ದು, ಯೋಜನೆಗಳ ಸಾಧಕ ಬಾಧಕಗಳು ಕುರಿತು ಸವಿವರ ಚರ್ಚೆ ನಡೆಯಿತು.
ಯೋಜನೆಗಳು ಭವಿಷ್ಯದ ದೂರದೃಷ್ಟಿಯೊಂದಿಗೆ ರೂಪಿತವಾಗಬೇಕು ಮತ್ತು ಸ್ಥಳೀಯರ ಹಿತಗಳನ್ನು ಗಮನದಲ್ಲಿರಿಸಿಕೊಳ್ಳಲೇಬೇಕೆಂದ ಶಾಸಕರು, ಸ್ಥಳೀಯರ ಅಗತ್ಯ ಮತ್ತು ಆದ್ಯತೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ತೊಕ್ಕೊಟ್ಟು ಬಸ್ ಸ್ಟ್ಯಾಂಡ್ ನಿಂದ ಮೆಲ್ಕಾರ್ ಕಡೆಗೆ ಹೋಗುವ ಜನಸಾಮಾನ್ಯರಿಗೆ ಅಂಡರ್ ಪಾಸ್, ಕಾಲು ಸೇತುವೆಗಳು ಯೋಜನೆಯಲ್ಲಿ ಅಡಕವಾಗಿರಬೇಕು. ಈ ಸಂಬಂಧ 15 ದಿನಗಳೊಳಗೆ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸೂಚಿಸಲಾಯಿತು.
ಕಲ್ಲಾಪು- ಕುಂಪಲ-ಕೋಟೆಕ್ಕಾರ್ ಬೀರಿ, ಕೋಟೆಕ್ಕಾರ್ ಜಂಕ್ಷನ್, ಉಚ್ಚಿಲ, ಕೆ ಸಿ ರೋಡ್, ತಲಪಾಡಿ ಇಲ್ಲಿನ ಪ್ರದೇಶಗಳಲ್ಲಿ ವಾಹನದಟ್ಟಣೆ ಭವಿಷ್ಯದಲ್ಲಿ ಹೆಚ್ಚಾಗಲಿದ್ದು, ಜನರ ಹಿತವನ್ನು ಗಮನದಲ್ಲಿರಿಸಿ ಯೋಜನೆಗಳು ರೂಪುಗೊಳ್ಳಬೇಕು; ಈ ಪ್ರದೇಶ ವ್ಯಾಪ್ತಿಯಲ್ಲಿ ಅನೇಕ ಶಾಲೆಗಳು, ಶಿಕ್ಷಣ ಸಂಸ್ಥೆಗಳಿರುವುದರಿಂದ ಕಾಲುಸೇತುವೆ ಗಳು ಅಗತ್ಯವಾಗಿರಬೇಕು ಎಂದು ಶಾಸಕರು ನುಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಪ್ರಬಂಧಕ ಕೆ ಎಂ ಹೆಗಡೆ, ಭೂಸ್ವಾಧೀನಾಧಿಕಾರ ಕೃಷ್ಣಮೂರ್ತಿ, ಡೆಪ್ಯುಟಿ ಇಂಜಿನಿಯರ್ ರವಿ ಕರ್ನಲ್, ಆರ್ ವಿ ಅಸೋಸಿಯೇಟ್ಸ್ ನ ರಾಮಚಂದ್ರನ್, ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಸತ್ಯನಾರಾಯಣ ಉಪಸ್ಥಿತರಿದ್ದರು.