ಮಂಗಳೂರು, ಜುಲೈ. 21: ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆಗಳು ಜನಪರ ಕಾರ್ಯಕ್ರಮಗಳನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕೆಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಮಾದರಿ ಕಾರ್ಯಕ್ರಮಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು. ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತ ಸಮಗ್ರ ಚಿತ್ರಣ ನೀಡಿದ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚನ್ನಪ್ಪಗೌಡ ಅವರು, ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸರಕಾರಕ್ಕೆ 15 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. 10 ಕೋಟಿ ರೂ. ಸರಕಾರದಿಂದ ಬಿಡುಗಡೆಯಾಗಬೇಕಿದೆ. ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.
ನಗರದ ಪಡೀಲ್ ಬಜಾಲ್ ರೈಲ್ವೇ ಕೆಳಸೇತುವೆಗೆ ಸರಕಾರದಿಂದ ಶೇ. 50 ಅನುದಾನದ ಮಂಜೂರಾತಿಗೆ ಬೇಡಿಕೆ ಸಲ್ಲಿಸಲಾಗಿದೆ. ಬಂಟ್ವಾಳ, ಮೂಡಬಿದ್ರೆ ಮತ್ತು ಕಡಬಕ್ಕೆ ಮಿನಿ ವಿಧಾನಸೌಧ ಮಂಜೂರಾತಿ ಬೇಡಿಕೆ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 466 ಖಾಲಿ ಹುದ್ದೆಗಳನ್ನು ತುಂಬುವ ಅನಿವಾರ್ಯತೆ, ಇನ್ನಿತರ ಇಲಾಖೆಗಳ ಬೇಡಿಕೆಗಳು, ಪ್ರವಾಸೋದ್ಯ ಮ ಅಭಿವೃದ್ಧಿಗೆ ಅಗತ್ಯ ಕ್ರಮ, ಪುತ್ತೂರು ತಾಲೂಕಿನ ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ ರೂ. 75 ಕೋಟಿ ಬಿಡುಗಡೆ ಮಾಡಬೇಕಿದೆ ಎಂಬುದನ್ನೊಳಗೊಂಡಂತೆ ಜಿಲ್ಲೆಯ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಈವರಗೆ ಕಳೆದ ಸಾಲಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮಳೆಯಾಗಿದ್ದು, ಆಗಸ್ಟ್ ವರೆಗೆ ಕಾದುನೋಡಲು ನಿರ್ಧರಿಸಲಾಗಿದೆ. ರಸಗೊಬ್ಬರ ದಾಸ್ತಾನಿದೆ. ಕೆರೆಗಳ ಪುನರುಜ್ಜೀವನಕ್ಕೆ ಹಣ ದುರುಪಯೋಗವಾಗದಂತೆ ಸ್ಥಳೀಯ ಅಗತ್ಯಗಳನ್ನು ಪರಿಶೀಲಿಸಿ ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ನಡೆಸಿ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯನಾರಾಯಣ್ ಅವರಿಗೆ ಸಚಿವರು ಸೂಚಿಸಿದರು.
ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮತ್ತು ಮಿನಿವಿಧಾನಸೌಧಗಳ ಪ್ರಗತಿ ಕಾಲಮಿತಿಯೊಳಗೆ ಆಗಬೇಕೆಂದು ಸೂಚಿಸಿದ ಸಚಿವರು, ಪ್ರಾಕೃತಿಕ ವಿಕೋಪದ ಕಾಮಗಾರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಹಾಗೂ ಕೆ ಆರ್ ಡಿ ಸಿಎಲ್ ಕಾಮಗಾರಿ ಬಗ್ಗೆ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಪ್ರತ್ಯೇಕ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವ ನಿರ್ಧಾರ ಪ್ರಕಟಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಒಟ್ಟು 18,192 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ 2012ರಿಂದ ಜೂನ್ 2012ರವರೆಗೆ ವೃದ್ದಾಪ್ಯ ವೇತನ-188, ವಿಧವಾ ವೇತನ-2664, ಅಂಗವಿಕಲ ವೇತನ-3295 ಒಟ್ಟು 7822 ಫಲಾನುಭವಿಗಳಿಗೆ ಮಂಜೂರಾತಿ ಮಾಡಲಾಗಿದೆ. ಒಟ್ಟು 67473 ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿದೆ.
ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೇತ್ರಾವತಿ ನದಿಗೆ ತುಂಬೆ ಬಳಿ ಕಿಂಡಿ ಅಣಿಕಟ್ಟು ನಿರ್ಮಾಣಕ್ಕೆ ಅನುಮೋದಿತ ಅಂದಾಜು ರೂ. 40 ಕೋಟಿ ಆಗಿದ್ದು, ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಆರ್ಥಿಕ ಮಾದರಿಯ 1/3 ಭಾಗದಲ್ಲಿ 11 ಕೋಟಿ ಬಿಡುಗಡೆಯಾಗಿದೆ. ಒಟ್ಟು 10 ಕೋಟಿ ಖರ್ಚಾಗಿರುತ್ತದೆ. ಸಿವಿಲ್ ಕಾಮಗಾರಿ 40 ಶೇಕಡ ಮುಗಿದಿರುತ್ತದೆ. ಪರಿಷ್ಕೃತ ಅಂದಾಜುಪಟ್ಟಿ ಪ್ರಕಾರ 75.50 ಕೋಟಿ ಅಗತ್ಯವಿದೆ.
64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ಕಾಮಗಾರಿ ಪ್ರಗತಿಯಲ್ಲಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿರುತ್ತದೆ. ಅಂದಾಜು 2618.50 ಲಕ್ಷಗಳಲ್ಲಿ 361.60 ಲಕ್ಷ ಮೊತ್ತ ವೆಚ್ಚ ಮಾಡಲಾಗಿದೆ.
ಪಿಎಂಜಿಎಸ್ವೈ ಯಡಿ ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ 2 ಕಾಮಗಾರಿಗಳಿಗೆ 263.45 ಲಕ್ಷ ರೂ. ಮಂಜೂರಾಗಿದ್ದು, 5.4 ಕಿ.ಮೀ ಉದ್ದ ಕಾಮಗಾರಿ ಪೂರ್ಣಗೊಂಡಿದೆ. 12-13ನೇ ಸಾಲಿಗೆ 9 ರಸ್ತೆಗಳಿಗೆ 5242.46 ಲಕ್ಷಗಳಿಗೆ 82.57 ಕಿ.ಮೀ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿ ಹಂತದಲ್ಲಿದೆ. ಜಿಲ್ಲೆಯಲ್ಲಿ 11-12ನೇ ಸಾಲಿನಲ್ಲಿ ಮುಖ್ಯಮಂತ್ರಿಯವರ ಗ್ರಾಮೀಣ ರಸ್ತೆ ನಿಧಿ ಯೋಜನೆಯಡಿ 10 ಪ್ಯಾಕೇಜುಗಳು ಇದ್ದು, 61 ಕಾಮಗಾರಿಗಳ 138.27 ಕಿ.ಮೀ. ಉದ್ದದ ರಸ್ತೆಗಳು ಮಂಜೂರಾಗಿದೆ. ಮಂಜೂರಾದ 4544.80 ಲಕ್ಷ ಮೊತ್ತದಲ್ಲಿ 2548.8 ಲಕ್ಷ ಖರ್ಚಾಗಿರುತ್ತದೆ. ಇದರಲ್ಲಿ 51.25 ಕಿ.ಮೀ ಡಾಮರೀಕರಣವಾಗಿದ್ದು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಜನವರಿ 2013ರೊಳಗೆ ಮುಕ್ತಾಯ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮೀಣ ವಸತಿಯಡಿ ವಿವಿಧ ಯೋಜನೆಗಳನ್ನು ತಹಸೀಲ್ದಾರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯ ಸಾಧಿಸಿ ಗ್ರಾಮಪಂಚಾಯತ್ ಮಟ್ಟದಲ್ಲಿ ನಿವೇಶನ ಗುರುತಿಸಬೇಕೆಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೂಚಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 12-13ನೇ ಸಾಲಿನಲ್ಲಿ 2919.43 ಲಕ್ಷ ಅಯವ್ಯಯ ನಿಗದಿಯಾಗಿದೆ. 77753 ಕುಟುಂಬಗಳ ನೋಂದಣಿಯಾಗಿದೆ. ಒಟ್ಟು 77,523 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. 56.58 ಲಕ್ಷ ವೆಚ್ಚ ಮಾಡಲಾಗಿದೆ. 4494 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 72 ಕಾಮಗಾರಿಗಳು ಪೂರ್ಣಗೊಂಡಿವೆ. 4422 ಕಾಮಗಾರಿಗಳು ಪ್ರಗತಿಯಲ್ಲಿವೆ. 23478 ಮಾನವ ದಿನಗಳನ್ನು ಉತ್ಪಾದಿಸಲಾಗಿದೆ. 1337 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ನಗರಪಾಲಿಕೆಯ ಸಾಧನೆ ಉತ್ತಮವಾಗಿದ್ದು, %90 ಅನುದಾನ ಖರ್ಚಾಗಿದೆ. ಆದರೆ ಘನ,ದ್ರವ್ಯತ್ಯಾಜ್ಯ ಸಂಗ್ರಹ ಸವಾಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದಾಗ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಸಾಧನೆ ದಾಖಲಿಸುವಂತೆ ಉಸ್ತುವಾರಿ ಸಚಿವರು ಸೂಚಿಸಿದರು.
ಸಭೆಯಲ್ಲಿ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಮುಜರಾಯಿ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ಮೇಯರ್ ಗುಲ್ಜಾರ್ ಭಾನು, ಪೊಲೀಸ್ ಕಮಿಷನರ್ ಸಿಮಂತ್ ಕುಮಾರ್ ಸಿಂಗ್, ಎಸ್ ಪಿ ಅಭಿಷೇಕ್ ಗೊಯಲ್ ಉಪಸ್ಥಿತರಿದ್ದರು. ಎಲ್ಲ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.