Tuesday, July 3, 2012

ಒಂದು ಸಾವಿರದಿಂದ ಲಕ್ಷ ರೂ.ಗಳಿಗೆ ದಂಡ ಹೆಚ್ಚಿಸಿ:ಯೋಗೀಶ್ ಭಟ್

ಮಂಗಳೂರು,ಜುಲೈ.03: ಕಳೆದ ವರ್ಷ ನಗರಪಾಲಿಕೆ ವ್ಯಾಪ್ತಿಯಲ್ಲಿ 270 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 550 ಪ್ರಕರಣಗಳು ವರದಿಯಾಗಿರುವುದು ಅಪಾಯಕಾರಿ ಬೆಳವಣಿಗೆ; ಮಂಗಳೂರು ನಗರ ಸ್ವಚ್ಛ ನಗರದೊಂದಿಗೆ ರೋಗ ಮುಕ್ತವಾಗಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ವಿಧಾನಸಭಾ ಉಪಸಭಾಪತಿಗಳಾದ ಎನ್. ಯೋಗೀಶ್ ಭಟ್ ಅವರು ಹೇಳಿದರು.
ಇಂದು ನಗರದ ವೆನ್ಲಾಕ್ ಆಸ್ಪತ್ರೆಯ ಆರ್ಎಪಿಸಿಸಿ (Regional Advanced Paediatric Care Centre) ಸಭಾಂಗ ಣದಲ್ಲಿ ದಕ್ಷಿನ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾ ನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಲೇರಿಯಾ ಹಾಗೂ ಡೆಂಗ್ಯು ನಿಯಂತ್ರಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮರ್ಥ ಕಾರ್ಯಾಚರಣೆ ಮತ್ತು ಗರಿಷ್ಠ ದಂಡ ವಿಧಿಸುವುದರ ಮೂಲಕ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದ ಅವರು, ಈಗಿರುವ 1,000ರೂ. ದಂಡ ಪರಿಣಾಮಕಾರಿ ಕಾರ್ಯಾಚರಣೆಗೆ ನೆರವಾಗುವುದಿಲ್ಲ ಎಂದರು. ಮಲೇರಿಯಾ ಸೆಲ್ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು; ಫಾಗಿಂಗ್ ಬಗ್ಗೆ ಅಧ್ಯಯನವಾಗಬೇಕು; ಕಾಯಿಲೆಗೆ ಕಟ್ಟಡ ಕಾರ್ಮಿಕರೇ ಹೆಚ್ಚು ಬಲಿಯಾಗುತ್ತಿದ್ದು, ಈ ಬೆಳವಣಿಗೆಯನ್ನು ತಡೆಯಬೇಕು. ಇದಕ್ಕಾಗಿ ಸಂಬಂಧಪಟ್ಟವರ ತುರ್ತು ಸಭೆ ಕರೆಯಬೇಕೆಂದು ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಜೆ. ಕೃಷ್ಣ ಪಾಲೇಮಾರ್ ಅವರು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಎಲ್ಲರ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದರು. ಈಗಾಗಲೇ ಮಂಗಳೂರು ಮಹಾನಗರಪಾಲಿಕೆ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಪಾಲಿಕೆ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಗುಲ್ಜಾರ್ ಭಾನು ಅವರು ಆರೋಗ್ಯವೇ ಭಾಗ್ಯ; ಆರೋಗ್ಯಕ್ಕಿಂತ ಮಿಗಿಲಾದುದು ಯಾವುದಿಲ್ಲ ಎಂದರು. ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಉಪಮೇಯರ್ ಶ್ರೀಮತಿ ಅಮಿತಕಲಾ, ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಜಂಟಿ ಆಯುಕ್ತರಾದ ಶ್ರೀಕಾಂತ ಭಟ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಓ. ಶ್ರೀರಂಗಪ್ಪ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರಪಾಲಿಕೆ ಸಿಬ್ಬಂದಿಗಳು ಜಂಟಿ ಅಭಿಯಾನ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಹಮ್ಮಿಕೊಂಡಿದ್ದು ನಾಗರೀಕರ ಸಹಕಾರವನ್ನು ಕೋರಿದರು.
ಡಾ ಸುದರ್ಶನ್ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಭಾಸ್ಕರ ರಾವ್ ವಂದಿಸಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಜಯರಾಂ ಕಾರ್ಯಕ್ರಮ ನಿರೂಪಿಸಿದರು. ಮಲೇರಿಯ ಅಧಿಕಾರಿ ಡಾ ಅರುಣ್ ಅವರು ಮಲೇರಿಯ ಹಾಗೂ ಡೆಂಗ್ಯು ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.