ಮಂಗಳೂರು,ಜುಲೈ.17: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಪಿಡಿಒಗಳ ವಿರುದ್ಧ ಸದಸ್ಯರ ಅಸಮಾಧಾನ, ನಕ್ಸಲ್ ಪೀಡಿತ ಪ್ರದೇಶಾಭಿವೃದ್ದಿ ವೇಳೆ ಜನಪ್ರತಿನಿಧಿಗಳನ್ನಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಸರ್ವಶಿಕ್ಷಣ ಅಭಿಯಾನದಡಿ ಕಟ್ಟಡ ನಿರ್ಮಾಣ ಇವೇ ಮುಂತಾದ ವಿಷಯಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ವಿಷಯಗಳು ಸುದೀರ್ಘ ಚರ್ಚೆಗೊಳಪಟ್ಟವು.
ಸಭೆಯಲ್ಲಿ ಇದಕ್ಕೆ ಉತ್ತರಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಡಿ ಬರುವ ಕಾರ್ಯಕ್ರಮಗಳನ್ನು ಕಾನೂನು ಪ್ರಕಾರವೇ ಅನುಷ್ಠಾನಕ್ಕೆ ತರುತ್ತಿರುವುದಾಗಿ ಸಮಜಾಯಿಷಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ. ಶೈಲಜಾ ಭಟ್ ಅವರು, ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆಯಾಗಬೇಕೇ ಹೊರತು ವೈಯಕ್ತಿಕ ಆರೋಪ, ಪ್ರತ್ಯಾರೋಪ ಸಲ್ಲ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡಬೇಕೆಂದ ಅವರು, ಉತ್ತರ ಸಮರ್ಪಕವಾಗಿಲ್ಲದಿದ್ದರೆ ಗೊಂದಲಗಳು ಉದ್ಭವವಾಗುವವು ಎಂದರು.
ಸಭೆಯಲ್ಲಿ ಹೆಚ್ಚಿನ ಸದಸ್ಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ವಿರುದ್ಧ ಕ್ರಮಕ್ಕೆ ಒತ್ತಾಯಿಸಿದಾಗ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಮಾತನಾಡಿ, ಪಿಡಿಒಗಳ ವಿರುದ್ಧ ಕ್ರಮಕೈಗೊಳ್ಳುವಾಗ ಎಚ್ಚರಿಕೆ ಹಾಗೂ ಸಹಾನೂಭೂತಿಯಿಂದ ವರ್ತಿಸುವಂತೆ ಸರಕಾರದ ಸ್ಪಷ್ಟ ನಿರ್ದೇಶನ ಇದೆ. ರಾಜ್ಯದ ಮೂವರು ಪಿಡಿಒಗಳು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಸರಕಾರ ಈ ಎಚ್ಚರಿಕೆಯನ್ನು ನೀಡಿದೆ ಎಂದರು.
ಅಧಿಕಾರಿಯೊಬ್ಬರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದರೂ ತನಿಖೆ ಮತ್ತು ತನಿಖಾ ವರದಿ ಅತ್ಯಗತ್ಯ. ಆಡಳಿತಾತ್ಮಕ ವಿಷಯಗಳಲ್ಲಿ ಪ್ರಕ್ರಿಯೆ ಮುಗಿಯದೆ ಸ್ಥಳದಲ್ಲಿಯೇ ನಿರ್ಧಾರ ಪ್ರಕಟಿಸಲು ಸಾಧ್ಯವಾಗದು ಎಂದು ಸ್ಪಷ್ಟ ಪಡಿಸಿದರು.
ಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳಾದರೂ ಗ್ರಾಮೀಣ ಭಾಗವಾದ ಪೆರಿಂಜೆಯ ಖಾಸಗಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯ ಪುಸ್ತಕಗಳು ಪೂರೈಕೆಯಾಗದೆ ತೊಂದರೆಯಾಗಿದೆ ಎಂದು ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ ಸಭೆಯ ಗಮನ ಸೆಳೆದಾಗ, ಉತ್ತರಿಸಿದ ಶಿಕ್ಷಣಾಧಿಕಾರಿಗಳು ಅದು ಇತ್ತೀಚೆಗೆ ಅನುದಾನಕ್ಕೊಳಪಟ್ಟ ಶಾಲೆಯಾಗಿದೆ. ಹಾಗಾಗಿ ಬೇಡಿಕೆ ಸಲ್ಲಿಸುವಾಗ ವಿಳಂಬವಾಗಿದೆ. ಬೇಡಿಕೆ ಪಟ್ಟಿಗೆ ಅನುಸಾರವಾಗಿ ಪಠ್ಯ ಪುಸ್ತಕಗಳು ಪೂರೈಕೆಯಾಗುತ್ತಿವೆ. ಕೆಲವೇ ದಿನಗಳಲ್ಲಿ ಪೆರಿಂಜೆಗೂ ಪುಸ್ತಕಗಳು ಲಭಿಸಲಿವೆ ಎಂದರು.
ಶಿಕ್ಷಕರ ಕೊರತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ನಗರಗಳ ಶಾಲೆಗಳಲ್ಲಿ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳವಿದೆ ಎಂದು ಅಭಿಪ್ರಾಯ ಪಟ್ಟ ಕೆಲವು ಸದಸ್ಯರು ಈ ಕುರಿತು ಅಧ್ಯಯನ ನಡೆಸಿ ವರದಿ ಮಂಡಿಸ ಬೇಕೆಂದರು.
ಗ್ರಾಮ ಪಂಚಾಯತುಗಳ 85 ಸಿಬ್ಬಂದಿಗಳಿಗೆ ಬಡ್ತಿಗೆ ಸಂಬಂಧಿಸಿದಂತೆ, ರೋಸ್ಟರ್ ಪದ್ದತಿ ಅನುಸರಿಸದ ಪಂಚಾಯತುಗಳ ಸಿಬ್ಬಂದಿಯನ್ನು ಪರಿಗಣನೆಗೆ ತೆಗೆದು ಕೊಂಡಿಲ್ಲ. ಮೀಸಲಾತಿ ನಿಯಮದಂತೆ ಮೊದಲ ಹುದ್ದೆಯನ್ನು ಪರಿಶಿಷ್ಟ ಜಾತಿ ಹಾಗೂ ಎರಡನೆಯ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ನೀಡ ಬೇಕಿದೆ. ಬಳಿಕ ಉಳಿದ ಪಂಗಡಗಳಿಗೆ ಅವಕಾಶ ಕಲ್ಪಿಸ ಬೇಕು. ಈ ಸಂಬಂಧ ಕಾನೂನು ಹಿಂದಿನಿಂದಲೇ ಇದ್ದು, ಅದನ್ನು ಉಲ್ಲಂಘಿಸಲಾಗಿದೆ ಎಂದು ಉಪ ಕಾರ್ಯದರ್ಶಿ ಕೆ.ಶಿವರಾಮೇ ಗೌಡ ಸಭೆಗೆ ವಿವರಿಸಿದರು.
ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿದ್ದಾರೆ. ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು ಎಂದು ಸಿಇಒ ನುಡಿದರು. ನಕ್ಸಲ್ ಭಾಧಿತ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ರೂ.5 ಕೋಟಿ ವಿಶೇಷ ಅನುದಾನ ನೀಡಲು ಒಪ್ಪಿರುವುದಾಗಿ ಎಂದು ಡಾ. ವಿಜಯಪ್ರಕಾಶ್ ತಿಳಿಸಿದರು.
2011-12ನೇ ಸಾಲಿನಲ್ಲಿ 30-54 ವಿಶೇಷ ಅನುದಾನದಡಿ ಕೈಗೆತ್ತಿಕೊಂಡಿರುವ 284 ಕೆಲಸಗಳ ಪೈಕಿ ಬಾಕಿ ಇರುವ ಕಾಮಗಾರಿಗಳನ್ನು ಮುಂದುವರಿಸ ಬಹುದಾಗಿದೆ. ಸರಕಾರ ಅನುದಾನ ಒದಗಿಸಲು ಒಪ್ಪಿದೆ ಎಂದು ಪ್ರಶ್ನೆಯೊದಕ್ಕೆ ಉತ್ತರಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾಯಕಾರಿ ಅಭಿಯಂತರರು ತಿಳಿಸಿದರು.
ಕಳೆದ ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕು.ನವ್ಯಾ ಶೆಟ್ಟಿ, ಕು.ಪಲ್ಲವಿ ಸುರತ್ಕಲ್, ಕು.ಸುಪ್ರೀತಾ ಮತ್ತು ಕನ್ನಡ ಮಾಧ್ಯಮದಿಂದ ಪ್ರಜ್ವಲ್ ಸನ್ಮಾನಿತರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಈಶ್ವರ ಕಟೀಲ್, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್ ಸಭೆಯಲ್ಲಿ ಉಪಸ್ಥಿತರಿದ್ದರು.