ಮಂಗಳೂರು. ಜುಲೈ 14 : ಸಾರ್ವಜಿನಿಕ ಜೀವನದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧಿಕಾರಿಗಳಿಗೆ ಸಲಹೆ ಮಾಡಿದರು.
ವಾರ್ತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಸಹಕಾರದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ದೈನಂದಿನ ಚಟುವಟಿಕೆಗಳಿಗೆ ಮಾಧ್ಯಮಗಳು ಎಷ್ಟರಮಟ್ಟಿಗೆ ಸರ್ಕಾರವನ್ನು ಅವಲಂಬಿಸಿರುತ್ತವೆಯೋ ಅಷ್ಟರ ಮಟ್ಟಿಗೆ ಸರ್ಕಾರಗಳು ತಮ್ಮ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲು ಮಾಧ್ಯಮಗಳನ್ನು ಅವಲಂಬಿಸಿರುತ್ತದೆ. ಮಾಧ್ಯಮ ಮತ್ತು ಇಲಾಖಾಧಿಕಾರಿಗಳು ಸಂವಹನ ಕೊರತೆ ನಿವಾರಿಸಿ ಕರ್ತವ್ಯ ನಿರ್ವಹಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮುದ್ರಣ ಮಾಧ್ಯಮದ ಕುರಿತು ಮಾತನಾಡಿದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಎ.ನಾರಾಯಣ ಅವರು, ಮಾಧ್ಯಮ ಒಂದು ಸಂಸ್ಥೆಯಲ್ಲ; ಅದೊಂದು ರಂಗ. ಹಾಗಾಗಿ ಅದು ಇಂತಹದೇ ರೀತಿಯಲ್ಲಿ ಇರಬೇಕು ಎಂದು ನಿರೀಕ್ಷಿಸಲಾಗದು. ಖಾಸಗಿಯಾಗಿದ್ದುಕೊಂಡು ಸಾರ್ವಜನಿಕ ಕೆಲಸ ಮಾಡುವ ರಂಗವದು ಎಂದರು.
ಪತ್ರಕರ್ತರಾಗಲು ಬೇಕಿರುವ ಅರ್ಹತೆಗಳು, ಅವರ ಕಾರ್ಯಶೈಲಿ, ಸಮಯಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕಾದ ರೀತಿಗಳ ಬಗ್ಗೆ ಮಾಹಿತಿ ನೀಡಿದರು.
ಇಂದು ಪತ್ರಿಕೆಗಳ ಸಂಪಾದಕೀಯ ಪುಟಗಳು ಮತ್ತು ಇತರ ಪುಟಗಳಿಗೂ ವ್ಯತ್ಯಾಸ ಕಡಿಮೆಯಾಗುತ್ತಿರುವುದಾಗಿ ಅಭಿಪ್ರಾಯ ಪಟ್ಟ ನಾರಾಯಣ್, ಜವಾಬ್ದಾರಿಯರಿತು ಕರ್ತವ್ಯ ನಿರ್ವಹಿಸುವುದರಿಂದ ಆಗಬಹುದಾದ ಅನುಕೂಲಗಳನ್ನು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಅನಿವಾರ್ಯತೆ ಹಾಗೂ ಕಾಲದೊಂದಿಗೆ ಓಡುವ ಓಟದಿಂದಾಗಿ ಹಲವು ವೇಳೆ ತಪ್ಪುಗಳಾದರೂ, ಸಮಾಜಕ್ಕೆ ಒಳಿತಾದ, ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಘಟನೆಗಳನ್ನು ಟಿವಿ9 ಹಿರಿಯ ನಿರ್ಮಾಪಕ ಶಿವಪ್ರಸಾದ್ ಟಿ.ಆರ್ ಅವರು ಹೇಳಿದರು.
ದೃಶ್ಯ ಮಾಧ್ಯಮಗಳು ಇನ್ನೂಶೈಶಾವವಸ್ಥೆಯಲ್ಲಿರುವುದರಂದ ಸುದ್ದಿ ಕುರಿತಾದ ಒಂದಷ್ಟು ಗೊಂದಲಗಳು ಇನ್ನೂ ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಅವು ಸರಿಹೋಗಲಿದೆ. ಜತೆಗೆ ದೃಶ್ಯ ಮಾಧ್ಯಮಗಳು ಋಣಾತ್ಮಕ ವಿಷಯಗಳನ್ನೇ ವರದಿ ಮಾಡುತ್ತವೆ ಎಂಬ ಅಭಿಪ್ರಾಯ ಜನರಲ್ಲಿದೆ; ಅದು ತಪ್ಪು. ಇಂತಹ ಅನೇಕ ವರದಿಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಉದಾಹರಣೆಗಳೊಂದಿಗೆ ಶಿವಪ್ರಸಾದ್ ವಿವರಿಸಿದರು.
ಡೆಕ್ಕನ್ ಹೆರಾಲ್ಡ್ ಮಂಗಳೂರು ಆವೃತ್ತಿಯ ಮುಖ್ಯಸ್ಥ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರು ಪ್ರತಿಕ್ರಿಯೆ ನುಡಿಯಲ್ಲಿ, ಜಿಲ್ಲಾ ಮಟ್ಟದಲ್ಲಿ ಪತ್ರಿಕೆ ಕಾರ್ಯನಿರ್ವಹಿಸುತ್ತಿರುವಾಗಿನ ಅನುಭವಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್.ವಿಜಯ ಪ್ರಕಾಶ್ ಮಾತನಾಡಿ, ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಕೆಲವೊಂದು ವರದಿಗಳು ಅಧಿಕಾರಿಗಳಿಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ದಕ್ಷಿಣ ಕನ್ನಡದಲ್ಲಿ ಅಂತಹ ಉತ್ತಮ ವಾತಾವರಣವಿದೆ ಎಂದರು.
ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡರು. ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ಸ್ವಾಗತಿಸಿ, ವಂದಿಸಿದರು.