ಮಂಗಳೂರು,ಜುಲೈ .12 : ನಗರಪ್ರದೇಶಗಳಲ್ಲಿ ಅಂಗನವಾಡಿಯಿಂದ ಹೊರಗುಳಿದಿರುವ (ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ) 0-6 ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯ ತೊಂದರೆಯಿರುವ ಮಕ್ಕಳನ್ನು ಗುರುತಿಸಲು ಜುಲೈ 22ರಂದು ಆರೋಗ್ಯ ಶಿಬಿರಗಳನ್ನು ಆಯೋಜಿಸಲು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಶಿಬಿರಗಳ ಆಯೋಜನೆಗೆ ಪೂರ್ವಭಾವಿ ಸಿದ್ಥತೆಗಳ ಕುರಿತು ಸವಿವರ ಚರ್ಚೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಲು ಸಲಹೆ ಮಾಡಿದ ಅಪರ ಜಿಲ್ಲಾಧಿಕಾರಿಗಳು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ 0-6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಗರ್ಭಿಣಿಯರ ಮತ್ತು ಹಾಲುಣಿಸುವ ತಾಯಿಯಂದಿರ ಆರೋಗ್ಯ ತಪಾಸಣೆಯನ್ನು ಜುಲೈ 22ರೊಳಗೆ ಮುಗಿಸಿ ವರದಿ ಸಲ್ಲಿಸುವ ಹೊಣೆಗಾರಿಕೆಯ ಬಗ್ಗೆ ಮಾತನಾಡಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಂಗನವಾಡಿಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಇಂತಹ ಮಕ್ಕಳ ಆರೋಗ್ಯ ತಪಾಸಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರದ ಭರವಸೆಯನ್ನು ಪಾಲಿಕೆ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ನೀಡಿದರು.
ಮುಲ್ಕಿ, ಮೂಡಬಿದ್ರೆ, ಬಂಟ್ವಾಳ, ಉಳ್ಳಾಲ, ಪುತ್ತೂರುಗಳಲ್ಲಿಯೂ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಡಾ ರುಕ್ಮಿಣಿ ತಿಳಿಸಿದರು. ನಗರದ ವೈದ್ಯಕೀಯ ಕಾಲೇಜುಗಳು ನೆರವು ಹಾಗೂ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಗರ್ಭಿಣಿ ಹಾಗೂ ಹಾಲುಡಿಸುವ ತಾಯಿಯಂದಿರ ಆರೋಗ್ಯ ಪರೀಕ್ಷೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಿಬಿರಗಳು ನಡೆಸುವ ಜಾಗವನ್ನು ನಿರ್ಧರಿಸಲು ಇನ್ನೊಂದು ಸುತ್ತಿನ ಸಭೆ ಕರೆಯಲು ನಿರ್ಧರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ, ಡಾ ಸುದರ್ಶನ್, ಡಿಡಿಪಿಐ ಮೋಸೆಸ್ ಜಯಶೇಖರ್, ಬಿಇಒ ದಯಾವತಿ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.