ಮಂಗಳೂರು,ಜುಲೈ.21:ದೃಶ್ಯ,ಶ್ರಾವ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಬಕ್ರೀದ್, ಸಂಕ್ರಾಂತಿ, ವಿಜಯದಶಮಿ ಮತ್ತು ಇತರೆ ಜಾತ್ರಾ ಸಂದರ್ಭಗಳಲ್ಲಿ ಧಾರ್ಮಿಕ ತಾಣಗಳಾದ ದರ್ಗಾ,ದೇವಾಲಯ,ಮಸೀದಿ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ಕರ್ನಾಟಕ ಪ್ರಾಣಿ ನಿಷೇಧ 1959 ಹಾಗೂ 1963 ರ ಕಾನೂನು ರೀತ್ಯಾ ನಿಷೇಧಿಸಲಾಗಿದ್ದು ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿವರಾಮ ಇವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಕಾನೂನು ಜಾರಿಯಲ್ಲಿ ತುಂಬಾ ಗಂಭೀರವಾಗಿದ್ದು ಎಲ್ಲಾ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳಲ್ಲಿ ದೇವರ ಹೆಸರಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯಲಿಕ್ಕಾಗಿ ಪ್ರಾಣಿ ಬಲಿ ನಿಷೇಧ ಕಾನೂನನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸಹ ತಿಳಿಸಿದ್ದಾರೆ.