Wednesday, July 20, 2011

281 ಅನಧಿಕೃತ ಧಾರ್ಮಿಕ ಕಟ್ಟಡ ತೆರವು

ಮಂಗಳೂರು,ಜುಲೈ.20:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ರಸ್ತೆ,ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿರ್ಮಾಣಗಳೆಂದು ಗುರುತಿಸಲಾದ 1579 ಧಾರ್ಮಿಕ ಕಟ್ಟಡ ನಿರ್ಮಾಣಗಳಲ್ಲಿ ಈ ವರೆಗೆ ಒಟ್ಟು 281 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ನೋಡಲ್ ಅಧಿಕಾರಿಗಳು, ತಹ ಶೀಲ್ದಾರರು ಮತ್ತು ಸಂಬಂಧ ಪಟ್ಟ ಅಧಿ ಕಾರಿಗಳು ಸಮಿತಿಯ ನಿರ್ದೇಶ ನದಂತೆ ಕೈಗೊಂಡ ಕ್ರಮಗಳನ್ನು ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅವರಿಗೆ ಮಾಹಿತಿ ನೀಡಿದರು.ಇನ್ನುಳಿದ ಪ್ರಕರಣಗಳ ತೆರವಿಗೆ ಆಗಸ್ಟ್ 15 ರವರೆಗೆ ಜಿಲ್ಲಾಧಿಕಾರಿಗಳು ಸಮಯಾವಕಾಶ ನೀಡಿದ್ದು, ನಿಗದಿತ ಸಮಯಮಿತಿಯೊಳಗೆ ಶೇ. 75ರಷ್ಟು ಸಾಧನೆ ದಾಖಲಾಗಬೇಕೆಂದು ಸೂಚಿಸಿದರು. .
ಒಟ್ಟು 281 ಪ್ರಕರಣಗಳನ್ನು ತೆರವುಗೊಳಿಸಿದ್ದು, 55 ಪ್ರಕರಣಗಳನ್ನು ಸಕ್ರಮಗೊಳಿಸಿದ್ದು, 1243 ಅನಧಿಕೃತ ನಿರ್ಮಾಣಗಳ ತೆರವು ಕಾರ್ಯಾಚರಣೆ ನಡೆಯಬೇಕಿದೆ. ಒತ್ತುವರಿಯಾದ ಸರ್ಕಾರಿ ಜಾಗಗಳನ್ನು ವಶಪಡಿಸಿಕೊಂಡು ಬೇಲಿ ಹಾಕಲು ಸೂಚಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಕಾಮಗಾರಿಗಳಿಗೆ ಜಮೀನಿನ ಅಗತ್ಯವಿದ್ದು, ಸರ್ಕಾರಿ ಜಮೀನಿನ ದುರುಪಯೋಗ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿದರು.
ಈ ಸಂಬಂಧ ಎಲ್ಲಾ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ನೆರವನ್ನು ನೀಡುವ ಭರವಸೆಯನ್ನು ನೀಡಿದರು. ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಪ್ರಕರಣ ಇತ್ಯರ್ಥ ಪಡಿಸುವ ಸಂಬಂಧ ಸಮಯ ಮಿತಿ ನಿಗಧಿಪಡಿಸಿದರು. ಕ್ಲೀಷೆ ಪ್ರಕರಣಗಳ ತನಿಖೆಗೆ ಉಪವಿಭಾಗಾಧಿಕಾರಿಗಳನ್ನೊಳಗೊಂಡ ಜಂಟಿ ಸ್ಥಳ ತನಿಖೆಗೂ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧೀಕ್ಷಕರಾದ ಲಾಬೂರಾಮ್ ಅವರು ಕಣ್ಣೂರಿನಿಂದ ಬಂಟ್ವಾಳದ ವರೆಗೆ ನಿರ್ಮಿಸಲ್ಪಟ್ಟ ಬಸ್ ನಿಲ್ದಾಣಗಳ ಬಗ್ಗೆ ಮಾಹಿತಿ ಕೋರಿದರು. ಅವುಗಳು ಅಕ್ರಮ ನಿರ್ಮಾಣಗಳಾಗಿದ್ದರೆ ತಕ್ಷಣವೇ ಈ ನಿಲ್ದಾಣಗಳನ್ನು ತೆರವು ಗೊಳಿಸಲು ಸೂಚಿಸಿದ ಎಸ್ ಪಿ ಅವರು, ಈ ಸಂಬಂಧ ಯಾವುದಾದರೂ ದೂರುಗಳು ದಾಖಲಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು. ಕಾನೂನು ಅನುಷ್ಠಾನ ಎಲ್ಲ ಅನುಷ್ಠಾನಾಧಿಕಾರಿಗಳ ಹೊಣೆ ಎಂದರು.