ಮಂಗಳೂರು,ಜುಲೈ.15:ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಜೊತೆಗೆ ಡೆಂಗ್ಯೂ ಕಾಯಿಲೆಯೂ ಸೇರ್ಪಡೆಗೊಂಡಿದ್ದು,2011ರ ಜೂನ್ ಅಂತ್ಯದ ವರೆಗೆ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.ಈ ವರ್ಷ 36 ಪ್ರಕರಣಗಳು ಪತ್ತೆಯಾದುದರಲ್ಲಿ ಮಂಗಳೂರು ನಗರದ ಬಿಜಾಪುರ ಕಾಲೊನಿ(ಲಿಂಗಪ್ಪಯ್ಯಕಾಡು)ನಲ್ಲಿ 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಹೊರತುಪಡಿಸಿ ಮತ್ಯಾವುದೇ ಸಾವುಗಳು ಡೆಂಗ್ಯು ಜ್ವರದಿಂದ ಜೂನ್ ಅಂತ್ಯದ ತನಕ ದಾಖಲಾಗಿಲ್ಲ ಎಂದು ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ. ಕಳೆದ ವರ್ಷ 2010 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 267 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು.
ಡೆಂಗ್ಯೂ ಏನಿದು?:ಇದ್ದಕ್ಕಿದ್ದಂತೆ ಜ್ವರ ಬಂದು ಕೈಕಾಲು,ಸ್ನಾಯುಕೀಲು ಸಂಧಿಗಳಲ್ಲಿ ಅಸಾಧ್ಯ ನೋವು ಕಂಡು ಬಂದು ರೋಗಿಯನ್ನು ಜರ್ಜರಿ ತವಾಗಿ ಸುತ್ತದೆ.3-4 ದಿನಗಳಲ್ಲಿ ಜ್ವರ ಇಳಿಮುಖವಾಗಿ ಪುನ: ಜ್ವರ ಏರುತ್ತದೆ. ಜ್ವರ ಬಂದಾಗ ಮೈಮೇಲೆ ಬೊಕ್ಕೆಗಳುಮೂಡುತ್ತದೆ.
ಈ ರೋಗ ಹೇಗೆ ಉಂಟಾಗುತ್ತದೆ?:ಡೆಂಗ್ಯೂ ರೋಗ ಈಡೀಸ್ ಈಜಿಪ್ಟಿ ಎಂಬ ಹಗಲು ಹೊತ್ತಲ್ಲಿ ಕಡಿಯುವ ಸೊಳ್ಳೆಯಿಂದ ಉಂಟಾಗುತ್ತದೆ. 4 ವಿಧದ ವೈರಾಣುಗಳಿಂದ ಡೆಂಗ್ಯೂ ಜ್ವರ ಹರಡುತ್ತದೆಯಾದರೂ ಭಾರತದಲ್ಲಿ ಡೆಂಗ್ಯೂ-2 ಎಂಬ ವೈರಾಣುವೇ ಈ ರೋಗಕ್ಕೆ ಕಾರಣವಾಗಿದೆ.
ಈಡೀಸ್ ಈಜಿಪ್ಟಿ ಸೊಳ್ಳೆ ಶುದ್ಧವಾದನಿಂತ ನೀರಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಹೀಗೆ ಸಂತಾನಾಭಿವೃದ್ಧಿಗೆ ಮೊಟ್ಟೆಗಳನ್ನು ಇಟ್ಟಾಗ ಆ ಮೊಟ್ಟೆಗಳ ಶೇ.33 ರಷ್ಟು ಮೊಟ್ಟೆಗಳು ಹುಟ್ಟಿನಿಂದಲೇ ಡೆಂಗ್ಯೂ ರೋಗಾಣುಗಳನ್ನು ಹೊಂದಿರುತ್ತವೆ. ಆದ್ದರಿಂದಲೇ ಡೆಂಗ್ಯೂ ವೈರಾಣುಗಳನ್ನು ಸುಲಭದಲ್ಲಿ ನಾಶ ಮಾಡಲು ಆಗುವುದಿಲ್ಲ.ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯ.ನಿಯಂತ್ರಣ ಕ್ರಮಗಳೆಂದರೆ ಮನೆ ಒಳಗೆ ಹೊರಗಡೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು,ಮನೆಯಲ್ಲಿ ನೀರನ್ನು ಶೇಖರಣೆ ಮಾಡುವ ಡ್ರಮ್ ಸಿಂಟೆಕ್ಸ್ ಇತ್ಯಾದಿಗಳನ್ನು ಭದ್ರವಾಗಿ ಮುಚ್ಚಬೇಕು. ಸೊಳ್ಳೆ ಕಡಿತದಿಂದ ಆದಷ್ಟು ಜಾಗ್ರತೆ ವಹಿಸಬೇಕು. ಸೊಳ್ಳೆ ನಿರೋಧಕ ಧೂಪಗಳನ್ನು ಬಳಸಬೇಕು,ಬೇವಿನ ಎಣ್ಣೆಯ ಮುಲಾಮುಗಳನ್ನು ಮೈಕೈಗೆ ಹಚ್ಚಿಕೊಳ್ಳಬೇಕು.
ಡೆಂಗ್ಯೂ ಒಂದು ಸ್ಥಾನಿಕ(ಎಂಡೋಮಿಕ್) ಖಾಯಿಲೆ ಹಾಗೂ ವೈರಾಣುವಿನಿಂದ ಹರಡುವುದರಿಂದ ಇದನ್ನು ಮುಂಜಾಗ್ರತೆಯಿಂದ ಮಾತ್ರ ತಡೆಯಲು ಸಾಧ್ಯ. ಡೆಂಗ್ಯೂ ರೋಗಕ್ಕೆ ನಿರ್ಧಿಷ್ಠವಾದ ಔಷಧಿಗಳು ಇಲ್ಲ.ರೋಗ ಲಕ್ಷಣಗಳನ್ನು ಪರಿಶೀಲಿಸಿ ಔಷಧೋಪಚಾರ ನೀಡಬೇಕಾಗಿರುತ್ತದೆ. ಇದು ಸಾವನ್ನು ತರುವ ಖಾಯಿಲೆ ಅಲ್ಲದ್ದಿದ್ದ್ದರೂ ನಿರ್ಲಕ್ಷ್ಯ ಉದಾಸೀನತೆ ಮಾರಣಾಂತಿಕವಾಗಬಹುದು.ಯಾವುದೇ ರೀತಿಯ ಜ್ವರ ಕಾಣಿಸಿಕೊಂಡಾಗ ಕೂಡಲೇ ವೈದ್ಯರಲ್ಲಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದಾಗಿದೆ.