ಮಂಗಳೂರು,ಜುಲೈ.26:ಮಂಗಳೂರಿನಲ್ಲಿ 173 ಕ್ಕೂ ಅಧಿಕ ಅಪಾರ್ಟಮೆಂಟ್ ಗಳಿದ್ದು ಬಹಳಷ್ಟು ಮನೆಗಳಲ್ಲಿ ಹೊರ ರಾಜ್ಯದ ಜನ ವಾಸವಿರುತ್ತಾರೆ. ಅವರುಗಳು ತಮ್ಮ ಮನೆಗೆಲಸಕ್ಕೆ 14 ವರ್ಷಗಳಿಗಿಂತ ಕಡಿಮೆ ವಯಸ್ಸಿನವರನ್ನು ನೇಮಿಸಿಕೊಂಡಿದ್ದಲ್ಲಿ ಅಂತಹವರ ಬಗ್ಗೆ ಸಹಾಯಕ ಕಾರ್ಮಿಕ ಅಧಿಕಾರಿಗಳಿಗಾಗಲಿ ಅಥವಾ ಜಿಲ್ಲಾಧಿಕಾರಿಗಳಿಗಾಗಲಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಡಿಸ್ಟ್ರಿಕ್ಟ್ ಲೇಬರ್ ಪ್ರಾಜೆಕ್ಟ್ ಸೊಸೈಟಿಯ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.14 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಮನೆಗೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ. ಆದ್ದರಿಂದ ಅಪಾರ್ಟ್ ಮೆಂಟುಗಳಲ್ಲಿ ವಾಸಿಸುವವರು ಈ ಬಗ್ಗೆ ಜಾಗೃತರಾಗಿ ನೆರೆಮನೆಗಳಲ್ಲಿ ಇಂತಹ ಬಾಲಕಾರ್ಮಿಕರನ್ನು ಕಂಡಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಿಗಾಗಲೀ ಅಥವಾ ಜಿಲ್ಲಾಧಿಕಾರಿಗಳಿಗಾಗಲೀ ತಿಳಿಸುವಂತೆ ಅಪಾರ್ಟ್ ಮೆಂಟ್ ರವರಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ನಾಗೇಶ್,ಮಹಾನಗರಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ 16424 ತಪಾಸಣೆ ಮಾಡಿ 30 ಬಾಲಕಾರ್ಮಿಕರ ಪತ್ತೆ:ಬಾಲಕಾರ್ಮಿಕ ಪದ್ದತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನದನ್ವಯ ಜಿಲ್ಲೆಯಲ್ಲಿ 2007-08 ರಿಂದ 2010-11 ರ ವರೆಗೆ ಕಾಮಿಕ ಇಲಾಖಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಒಟ್ಟು 16424 ತಪಾಸಣೆಗಳನ್ನು ,ನಡೆಸಿ 30 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆಯೆಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ತಿಳಿಸಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ತೆ ಹಚ್ಚಲಾದ 30 ಬಾಲಕಾರ್ಮಿಕರ ಪುನರ್ ವಸತಿ ಕಲ್ಪಿಸಲಾಗಿದೆ. ಬಾಲಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸುವ ನಿಧಿಗಾಗಿ ಮಾಲೀಕರಿಂದ ಒಟ್ಟು 2,25,000/- ರೂ.ಗಳ ನಿಧಿ ವಸೂಲಿ ಮಾಡಲಾಗಿದೆ
2011 ನೇ ಮೇ ಮಾಹೆಯಲ್ಲಿ ಮಂಗಳೂರಿನ ಬಂದರಿನಲ್ಲಿರುವ ಧಕ್ಕೆಯಲ್ಲಿ ಮೂರು ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಕೆಲಸದಿಂದ ವಿಮುಕ್ತಿಗೊಳಿಸಿ ಶಾಲೆಗೆ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಪೋಷಕರಿಂದ ತಮ್ಮ ಮನೆಗಳಲ್ಲಿ/ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿ ಕೊಂಡಿಲ್ಲ ಎಂಬ ಘೋಷಣಾ ಪತ್ರ ಪಡೆದು ಜಿಲ್ಲಾಧಿಕಾರಿಗಳಿಗೆ ದೃಢೀಕರಣ ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದ್ದು, ಜಿಲ್ಲೆಯ 913 ಶಾಲಾ ಕಾಲೇಜುಗಳಿದ್ದು ಈ ರೀತಿ ದೃಢೀಕರಣ ನೀಡಿದವರು ಹಲವರು ಮಾತ್ರ. ಆದ್ದರಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳವರು ಕೂಡಲೇ ದೃಢೀಕರಣ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ ಕುಮಾರ್ ,ಕಾರ್ಮಿಕ ಅಧಿಕಾರಿ ನಾಗೇಶ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.