ಮಂಗಳೂರು,ಜು.8: ಜಿಲ್ಲೆಯಲ್ಲಿ ಇಂದು 67.2 ಮಿ.ಮೀ ಮಳೆ ದಾಖಲಾಗಿದ್ದು, ವಿವಿಧೆಡೆ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ನೇತ್ರಾವತಿಯಲ್ಲಿ ನೀರಿನ ಮಟ್ಟ 5.2 ಮೀಟರ್ ಏರಿಕೆ ಆಗಿದೆ.ನಾಳೆಯೂ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ಜನರು ಯಾವುದೇ ಸಂದರ್ಭದಲ್ಲಿ ದೃತಿಗೆಡದೆ ಅಪಾಯಕಾರಿ ಸನ್ನಿವೇಶದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು. ಜಿಲ್ಲಾಡಳಿತ ಅಪಾಯಕಾರಿ ಪರಿಸ್ಥಿತಿಯನ್ನು ಎದರಿಸಲು ಸನ್ನದ್ದವಾಗಿದ್ದು, ಈಗಾಗಲೇ ಕೆಮ್ರಾಲ್ ಪರಿಸರದವರ ಕೋರಿಕೆಯನ್ವಯ ಅಲ್ಲಿಗೆ ಪಿಲಿಕುಳದಿಂದ ದೋಣಿಯನ್ನು ಕಳುಹಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ತಿಳಿಸಿದರು.
ಇಂದು ಈ ಸಂಬಂಧ ಕರೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಎದುರಿಸಲು ಪರಿಣತರ ತಂಡವನ್ನು ಸಜ್ಜುಗೊಳಿಸಲಾಗಿದ್ದು, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್, ಮಹಾನಗರಪಾಲಿಕೆ, ಪೊಲೀಸ್, ಬಂದರು, ಮೀನುಗಾರಿಕೆ ಇಲಾಖೆಯವರು ತಂತಮ್ಮ ಇಲಾಖಾ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು.ಮೀನುಗಾರಿಕೆ ಇಲಾಖೆ ನದಿ ತೀರದಲ್ಲಿ ಸಂಭವಿಸುವ ದುರಂತವನ್ನು ತಡೆಯಲು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಹೋಮ್ ಗಾರ್ಡ್ಸ ಮತ್ತು ಅಗ್ನಿಶಾಮಕದಳ ಸಮನ್ವಯದಿಂದ ಕ್ರಮಕೈಗೊಂಡು ಸಂತ್ರಸ್ತರಿಗೆ ನೆರವು ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೋಮ್ ಗಾರ್ಡ್ಸ್ ನಿಂದ 24 ಗಂಟೆ 50 ಜನರನ್ನು ಸಮಸ್ಯೆಗೆ ಸ್ಪಂದಿಸಲು ನೇಮಿಸಲಾಗಿದ್ದು, ಕಡಬ,ಸುಬ್ರಮಣ್ಯ,ಬಂಟ್ವಾಳಕ್ಕೆ 25 ಜನರನ್ನು ನೇಮಿಸಲಾಗಿದೆ. ತಹಸೀಲ್ದಾರರು ತಗ್ಗು ಪ್ರದೇಶಗಳನ್ನು ಗುರುತಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮನಾಪ 20 ವಾರ್ಡ್ ಗೆ ಒಂದು ಜೆಸಿಬಿ ಮತ್ತು ಟಿಪ್ಪರನ್ನು ಕಾಯ್ದಿರಿಸಿದ್ದು, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಂಪರ್ಕ ಜಾಲವನ್ನು ಸುವ್ಯವಸ್ಥಿತವಾಗಿಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಹವಾಮಾನ ಇಲಾಖೆ ಉಡುಪಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ, ದ. ಕ. ಜಿಲ್ಲೆಯಲ್ಲೂ ಮುಂಜಾಗ್ರತಾ ಸಭೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿ ಕಟ್ಟೆ,ತಹಸೀಲ್ದಾರ್ ರವೀಂದ್ರ ನಾಯಕ್,ಮನಾಪ ಆಯುಕ್ತ ರಮೇಶ್,ಜಿಲ್ಲಾ ಹೋಂ ಗಾರ್ಡ್ ಕಮಾಡೆಂಟ್ ಡಾ.ನಿದರ್ಶನ್ ಹೆಗ್ಡೆ,ಮೀನುಗಾರಿಕಾ ಇಲಾಖ ಉಪ ನಿರ್ದೇಶಕ ಸುರೇಶ್ ಕುಮಾರ್,ಡಿವೈಎಸ್ಪಿ ಬಿ.ಜೆ.ಭಂಡಾರಿ, ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿ ಸಿ.ಬಸವಣ್ಣ ಮತ್ತಿತರರು ಪಾಲ್ಗೊಂಡಿದ್ದರು.