ಪ್ರಸಕ್ತ ಮುಂಗಾರು ಹಂಗಾಮಿಗೆ ಮಂಗಳೂರು ತಾಲೂಕಿನ ಮಂಗಳೂರು- ಎ ಹೋಬಳಿಯನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಹೋಬಳಿಗಳು (16) ಈ ಯೋಜನೆಗೆ ಒಳಪಟ್ಟಿರುತ್ತವೆ. ಭತ್ತ ಬೆಳೆಯುವ ಎಲ್ಲಾ ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಬೆಳೆ ಸಾಲ ಪಡೆಯದ ಭತ್ತ ಬೆಳೆಯುವ ರೈತರಿಗೆ ಕೃಷಿ ವಿಮಾ ಯೋಜನೆ ಅಥವಾ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಐಚ್ಛಿಕವಾಗಿರುತ್ತದೆ.
ರಾಷ್ಟ್ರೀಯ ಕೃಷಿ ವಿಮಾನ ಯೋಜನೆಯಡಿ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ನಷ್ಟದ ನಿರ್ಧಾರವನ್ನು ವೈಯಕ್ತಿಕವಾಗಿ ನಿರ್ಧರಿಸಿ ಪರಿಹಾರ ನೀಡಲಾಗುವುದು. ಈ ರೀತಿ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ 48 ಗಂಟೆಯೊಳಗೆ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾ 080- 25322860 ಸಂಪರ್ಕಿಸಿ ತಕ್ಷಣ ಮಾಹಿತಿ ನೀಡಬಹುದಾಗಿದೆ.
ಬೆಳೆ ವಿಮಾ ಮೊತ್ತವನ್ನು ವಿಮೆ ಮಾಡಿಸಿದ ಬೆಳೆಯ ಪ್ರಾರಂಭಿಕ ಇಳುವರಿ ಮೊತ್ತಕ್ಕೆ ಮಾಡಿಸಬಹುದು. ಬೆಳೆ ಸಾಲ ಪಡೆಯದ ರೈತರಿಗೆ ಮುಂಗಾರು ಹಂಗಾಮಿಗೆ ಕಡೆಯ ದಿನಾಂಕವನ್ನು ಬಿತ್ತಿದ/ ನಾಟಿ ಮಾಡಿದ ನಂತರ 30 ದಿನಗಳೊಳಗೆ ಅಥವಾ 31-7-09 ಯಾವುದು ಮೊದಲೋ ಅದನ್ನು ಪರಿಗಣಿಸಲಾಗುವುದು. ಬೆಳೆ ಸಾಲ ಪಡೆದ ರೈತರ ಬೆಳೆ ವಿಮೆ ಮೊತ್ತ ಕನಿಷ್ಠ ಬೆಳೆ ಸಾಲದ ಮೊತ್ತಕ್ಕೆ ಸರಿಸಮಾನವಾಗಿರಬೇಕು. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಸಂಬಂಧ ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ ಗ್ರಾಮೀಣ ಸಹಕಾರಿ ಬ್ಯಾಂಕ್ ಹಾಗೂ ಆಯಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಸಹಾಯಕರನ್ನು, ಕೃಷಿ ಅಧಿಕಾರಿಗಳು ಅಥವಾ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.