Wednesday, July 15, 2009

ಮಂಗಳೂರಿನಲ್ಲಿ ಎನ್ ಡಿ ಆರ್ ಎಫ್


ಮಂಗಳೂರು, ಜು. 15: ಪ್ರವಾಹದಿಂದ ಸಂಭವಿಸುವ ಅನಾಹುತಗಳನ್ನು ತಡೆಯಲು ಮಂಗಳೂರಿಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ ಆಗಮಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಈ ಸಂಬಂಧ ಸಭೆಯನ್ನು ಏರ್ಪಡಿಸಲಾಗಿತ್ತು. ನಿನ್ನೆ ಬರ ನಿರ್ವಹಣಾ ಕೋಶದ ಮಾಹಿತಿಯಂತೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 7 ಪ್ರದೇಶಗಳನ್ನು ಮುಳುಗಡೆ ಪ್ರದೇಶಗಳೆಂದು ಗುರುತಿಸಲಾಗಿದ್ದು, ಪಡೆ ಶುಕ್ರವಾರ (17.7.09)ರಂದು ಈ ಪ್ರದೇಶಗಳಲ್ಲಿ ಡಮ್ಮಿ ಅಭ್ಯಾಸ ನಡೆಸಲಿರುವರು ಎಂದು ಅಸಿಸ್ಟೆಂಟ್ ಕಮಾಂಡರ್ ಆರ್. ಎನ್. ರನ್ ಮುಂಗ ಸಭೆಯಲ್ಲಿ ತಿಳಿಸಿದರು.ಇವರ ತುಕಡಿಯಲ್ಲಿ 36 ಮಂದಿಯಿದ್ದು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಪರಿಣತಿಯನ್ನು ಈ ಪಡೆ ಹೊಂದಿದೆ. ಪ್ರವಾಹ ಪೀಡಿತ ಪ್ರದೇಶಗಳ ನಕ್ಷೆ, ಜನಸಂಖ್ಯಾ ಮಾಹಿತಿ, ವಿಕೋಪ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಮೂಲಸೌಕರ್ಯ, ಆಧುನಿಕ ಉಪಕರಣಗಳು, ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವಿನಿಮಯಮಾಡಿಕೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಮಾತನಾಡಿ, ಜಿಲ್ಲಾಡಳಿತ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಯಾವುದೇ ಆತಂಕ ಬೇಡ ಎಂದರು. ಎನ್ ಡಿ ಆರ್ ಎಫ್ ತಮ್ಮ ಡಮ್ಮಿ ಅಭ್ಯಾಸದ ಸಂದರ್ಭದಲ್ಲಿ ಸ್ಕೌಟ್, ಗೈಡ್, ಮೀನುಗಾರರು ಮತ್ತು ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ಪ್ರದರ್ಶನ ನೀಡಲಿದೆ. ಸಭೆಯಲ್ಲಿ ಅಡಿಷನಲ್ ಎಸ್ ಪಿ ರಮೇಶ್, ಹೋಮ್ ಗಾರ್ಡ್ ಕಮಾಂಡೆಂಟ್ ನಿದರ್ಶನ ಹೆಗಡೆ, ಎ ಸಿ ಪ್ರಭುಲಿಂಗ ಕವಳಿಕಟ್ಟಿ,ಎನ್ ಡಿ ಆರ್ ಎಫ್ ನಿರೀಕ್ಷಕ ಎನ್. ಮೋಹನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.