
ಹೊರಗೆ ಬಿಡದೆ ಸುರಿಯುತ್ತಿದ್ದ ಮಳೆಯಾದರೆ,ಒಳಗೆ ಚೆನ್ನೆಮಣೆ ಆಟ, ಮಹಿಳಾ ಸಂಘಟನೆಗಳು ತಯಾರಿಸಿದ ಆಟಿ ತಿಂಗಳ ವಿಶೇಷ ತಿಂಡಿಗಳಾದ ಹಲಸಿನ ಗಟ್ಟಿ,ಹಪ್ಪಳ,ತಿಮರೆ ಚಟ್ನಿ,ಪುಂಡಿಗಸಿ,ಉಪ್ಪಡ್ ಪಚ್ಚಿರ್,ಮುಳ್ಳು ಸೌತೆ ಗಟ್ಟಿ ಸೇರಿದಂತೆ 20 ಕ್ಕೂ ಅಧಿಕ ತಿಂಡಿಗಳು ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿದ್ದುವು. ಮನೆಯ ಛಾವಡಿಯಲ್ಲಿ ಕರಾವಳಿಯ ಹಿಂದಿನ ಸಂಸ್ಕೃತಿಯನ್ನು ನೆನಪಿಸುವ ಕೃಷಿ ಉಪಕರಣ,ದೈವ ಸಾಮಗ್ರಿಗಳು,ಹಳೇ ತಾಮ್ರ ಮತ್ತು ಮಣ್ಣಿನ ಪಾತ್ರೆಗಳು,ಔಷಧಿಯ ಸಸ್ಯಗಳ ಪ್ರದರ್ಶನವನ್ನು ಸಮಗ್ರ ಮಾಹಿತಿಯೊಂದಿಗೆ ಏರ್ಪಡಿಸಲಾಗಿತ್ತು. ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ವಾಮನ ನಂದಾವರ,ನಿಸರ್ಗಧಾಮ ಸೊಸೈಟಿ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಆರ್.ಲೋಬೋ,ನಗರ ಪಾಲಿಕೆ ಉಪಮೇಯರ್ ರಜನಿ ದುಗ್ಗಣ್ಣ,ಆಕಾಶವಾಣಿ ನಿಲಯ ನಿರ್ದೇಶಕ ಡಾ.ಶಿವಾನಂದ ಬೇಕಲ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹರ್ಷಾ,ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.