Tuesday, July 7, 2009
ಅತಿವೃಷ್ಠಿ ಜಿಲ್ಲೆಗೆ 2 ಕೋಟಿ ರೂ. ಬಿಡುಗಡೆ: ಜೆ.ಕೃಷ್ಣ ಪಾಲೆಮಾರ್
ಮಂಗಳೂರು. ಜು.7: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ 8 ಜೀವಹಾನಿ ಹಾಗೂ ವ್ಯಾಪಕ ಪ್ರಮಾಣದ ಸೊತ್ತು ನಾಶ ಸಂಭವಿಸಿದ್ದು, ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಹಾಗೂ ಆಸ್ತಿ ಪಾಸ್ತಿ ನಷ್ಟಕ್ಕೆ ಪ್ರಕೃತಿ ವಿಕೋಪ ಪರಿಹಾರದಡಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ, ಬಂದರು ಇಲಾಖೆ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ಇಂದು ಸಚಿವರು ನೀರುಮಾರ್ಗ, ಬೊಂಡತಿಲ,ಬಂಟಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಮಳೆ ಹಾನಿಯನ್ನು ಪರಿಶೀಲನೆ ನಡೆಸಿದರು. ಕೃಷಿಕರ ಅಡಿಕೆ, ತೆಂಗು ಬೆಳೆಗಳಿಗೆ ಹಾನಿಯಾಗಿರುವುದಲ್ಲದೆ,8 ಮನೆಗಳು ಹಾನಿಗೊಳಗಾಗಿದ್ದು ಇವರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು. ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಗಿದ್ದು, ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದಿರುವ ಸಚಿವರು, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ದೋಣಿ ವ್ಯವಸ್ಥೆ, ಗಂಜಿಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಜನರ ಸುರಕ್ಷತೆಗೋಸ್ಕರ ಮೊಬೈಲ್ ಸ್ಕ್ವಾಡ್ ನ್ನು ರಚಿಸಲಾಗಿದ್ದು, ಸೂಕ್ತ ಬಂದೋಬಸ್ತುಗಳನ್ನು ಮಾಡಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ:
ಸಾರ್ವಜನಿಕವಾಗಿ ಕೆಲವರು ರಸ್ತೆಯ ಬದಿಗಳ ತೋಡುಗಳಿಗೆ ಅಕ್ರಮವಾಗಿ ತಡೆ ಹಾಕಿ ಕೃತಕ ನೆರೆ ಸೃಷ್ಟಿಸಿ ಸಾರ್ವಜನಿಕ ಜೀವನಕ್ಕೆ ತೊಂದರೆಯುಂಟು ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಮಳೆಯ ಪರಿಸ್ಥಿತಿಯನ್ನ್ನು ಅವಲೋಕಿಸಿ ಶಾಲಾ ಮಕ್ಕಳಿಗೆ ರಜೆ ನೀಡುವ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿರುವುದಾಗಿ ಹೇಳಿದರು.