ಮಂಗಳೂರು, ಜು.18: ಅತಿವೃಷ್ಠಿ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತ ಕನಿಷ್ಠವಾಗಿದ್ದು, ಕಡಿಮೆ ಮೊತ್ತದ ಪರಿಹಾರ ನೀಡುವುದು ಮಾನವೀಯವಲ್ಲ ಎಂದು ಜನಪ್ರತಿನಿಧಿಗಳು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಶಾಸಕರು,ಮನೆ ಹಾನಿ, ಕೃಷಿ ನಾಶದ ಸಂದರ್ಭಗಳಲ್ಲಿ ನಿಕೃಷ್ಟ ಪರಿಹಾರ ನೀಡದೆ ಸೂಕ್ತ ಪರಿಹಾರ ಧನ ನೀಡುವಂತೆ ಶಾಸಕರಾದ ಎನ್. ಯೋಗೀಶ್ ಭಟ್, ಅಭಯಚಂದ್ರ ಜೈನ್, ರಮಾನಾಥ ರೈ ಅವರು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಅಗತ್ಯ ಕಾನೂನು ತಿದ್ದುಪಡಿಯ ಭರವಸೆಯನ್ನೂ ನೀಡಿದರು. ಮಳೆಗಾಲದಲ್ಲಿ ಮೆಸ್ಕಾಂ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ದೂರಿಗೆ ಮೆಸ್ಕಾಂ ಅಧಿಕಾರಿಗಳ ವಿವರಣೆಯನ್ನು ಕೋರಲಾಯಿತಲ್ಲದೆ, 24 ಗಂಟೆ ಸೇವೆಯ ಬಗ್ಗೆ 1917 ತುರ್ತು ಸೇವೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಬಡವರಿಗೆ ಮನೆ ನೀಡುವ ಬಗ್ಗೆ ನಡೆದ ಚರ್ಚೆಯಲ್ಲಿ ಇಂದಿರಾ ಆವಾಸ್ ಯೋಜನೆಯಡಿ441 ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲು ಸಚಿವರು ಅಧಿಕಾರಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರುಅಂಗವಿಕಲ ಫಲಾನುಭವಿಗಳನ್ನು ಗುರುತಿಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸೈಕ್ರಿಯಾಟ್ರಿಸ್ಟ್ ಮತ್ತು ಸೈಕಾಲಜಿಸ್ಟ್ ಅವರನ್ನು ನೇಮಕ ಮಾಡುವ ಅಧಿಕಾರವನ್ನು ಸಚಿವರು ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ. ಪ್ರಭುದೇವ್ ಅವರಿಗೆ ನೀಡಿದರಲ್ಲದೆ ಅಂಗವಿಕಲರಿಗೆ ಸರ್ಕಾರ ನೀಡಿರುವ ಸವಲತ್ತು ತಲುಪಿಸಲು ಮೊಬೈಲ್ ಸ್ಕ್ವಾಡ್ ರಚಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಯಾವುದೇ ಅಧಿಕಾರಿಗಳು ಫಲಾನುಭವಿಗಳಿಗೆ ಸವಲತ್ತು ನೀಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಲಂಚ ತೆಗೆದುಕೊಳ್ಳುವ ಪ್ರಕರಣಗಳು ಬಂದರೆ ಸಚಿವರಿಗೆ ನೇರ ದೂರು ನೀಡುವಂತೆ ತಿಳಿಸಿದ ಸಚಿವರು ಅಂತಹವರ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆಯನ್ನು ನೀಡಿದರು. ನಿಗದಿತ ಪ್ರದೇಶಗಳಿಗೆ ಪರವಾನಿಗೆ ಪಡೆದ ಬಸ್ಸುಗಳು ಆ ಪ್ರದೇಶಗಳಲ್ಲಿ ಸಂಚರಿಸದಿದ್ದರೆ ಅಂತಹ ಬಸ್ಸುಗಳ ಪರವಾನಿಗೆ ರದ್ದು ಪಡಿಸಿ ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಬಸ್ಸುಗಳಿಗೆ ಪರವಾನಿಗೆ ನೀಡಲು ಸಚಿವರು ಸೂಚಿಸಿದರು. ಬಂಟ್ವಾಳ ಚತುಷ್ಪತ ಕಾಮಗಾರಿ ನಡೆಯುತ್ತಿರುವ ಪ್ರದೇಶ ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಕಡ್ಡಾಯವಾಗಿ ಅದಿರು ಲಾರಿ ಸಂಚಾರ ನಿಷೇಧದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಯಿತು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ವೆಂಕಟ್ ದಂಬೇಕೋಡಿ, ಮಹಾಪೌರ ಎಂ. ಶಂಕರ್ ಭಟ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.