ಮಂಗಳೂರು, ಜು.19: ಕಳೆದ 39 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯಲ್ಲಿ 3918.33 ಲಕ್ಷ ರೂ.ಹಾನಿಯಾಗಿದ್ದು, 584 ಲಕ್ಷ ರೂ. ಸಿ ಆರ್ ಎಫ್ ನಿಧಿಯಲ್ಲಿದ್ದು, 3334.00 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ಕೋರಲಾಗಿದ್ದು, ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡುವುದಾಗಿ ರಾಜ್ಯ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಅವರು ತಿಳಿಸಿದರು.
ಇಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಮೆಸ್ಕಾಂ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ನಾಶ, ನಷ್ಟದ ಮಾಹಿತಿಯನ್ನು ಪಡೆದುಕೊಂಡರು. 23,816 ಹೆಕ್ಟೇರ್ ನಾಟಿಯಾಗಿದ್ದು, 99.55 ಹೆಕ್ಟೇರ್ ಪ್ರದೇಶ ನೆರೆ ಪೀಡಿತವಾಗಿದೆ. 41 ಗ್ರಾಮಗಳ 193 ರೈತರ ಕೃಷಿ ಭೂಮಿ ಹಾನಿಗೊಳಗಾಗಿದ್ದು, ನೆರೆ ಇಳಿದ ಬಳಿಕವಷ್ಟೇ ಸಮಗ್ರ ವರದಿ ನೀಡಲು ಸಾಧ್ಯ ಎಂದು ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು 23 ಲಕ್ಷ ರೂ. ಹಾನಿಯಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಮೆಸ್ಕಾಂನ ನಷ್ಟ 143.21 ಲಕ್ಷ ರೂ. ಮಳೆಯಿಂದಾಗಿ 179 ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗಿದ್ದು, 1,160 ಕಂಬ ಹಾನಿಗೊಳಗಾಗಿದೆ. 393 ಗ್ರಾಮ (ದ.ಕ. ಮತ್ತು ಉಡುಪಿ) ಗಳಲ್ಲಿ ಹೆಚ್ಚಿನ ನಷ್ಟ ಸಂಭವಿಸಿದೆ ಎಂದರು. ಮನಾಪ ವ್ಯಾಪ್ತಿಯಲ್ಲಿ 5.48 ಕೋಟಿ ಹಾನಿಯಾಗಿದೆ ಎಂದು ಮನಾಪ ಆಯುಕ್ತ ರಮೇಶ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಯ ಹೆಚ್ಚಿನ ರಸ್ತೆಗಳು ಹಾಳಾಗಿದ್ದು, ಮಳೆಗಾಲ ಮುಗಿಯಲು ಕಾಯಬೇಕಿಲ್ಲ ತುರ್ತಾಗಿ ಆಗಬೇಕಾಗಿರುವ ರಸ್ತೆ ರಿಪೇರಿ ಕೆಲಸವನ್ನು ಶೀಘ್ರದಲ್ಲಿ ಮಾಡಿ ಎಂದು ಸೂಚಿಸಿದ ಸಚಿವರು, ಅದಿರಿನ ಲಾರಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಮಳೆಗಾಲ ಮುಗಿಯುವವರೆಗೆ ಅದಿರು ಲಾರಿಗಳ ಸಂಚಾರ ನಿಷೇಧಕ್ಕೆ ಜಿಲ್ಲಾಡಳಿತಕ್ಕೆ ಸಭೆಯಲ್ಲಿ ನಿರ್ದೇಶನ ನೀಡಿದರು.
ಪರಿಹಾರ ನೀಡುವಾಗ ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ಉದಾರತೆಯನ್ನು ತೋರಲು ಅಧಿಕಾರಿಗಳಿಗೆ ಸಲಹೆ ಮಾಡಿದ ಸಚಿವರು, ಶಾಸಕರಾದ ಶ್ರೀ ಅಭಯಚಂದ್ರ ಜೈನ್, ಶ್ರೀ ಯೋಗೀಶ್ ಭಟ್, ಶ್ರೀ ರಮಾನಾಥ ರೈ, ಶ್ರೀಯು. ಟಿ. ಖಾದರ್ ಅವರುಗಳ ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಉಳ್ಳಾಲದಲ್ಲಿ ನೆರೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕ ಅಶ್ರಫ್ ನ ಹೆತ್ತವರಿಗೆ ಮತ್ತು ಬಂಟ್ವಾಳದ ರಿಜ್ವಾನ್ ಅವರಿಗೆ ಪರಿಹಾರವನ್ನು ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್, 3ನೇ ಹಣಕಾಸು ಆಯೋಗದ ಅಧ್ಯಕ್ಷ ಎ. ಜಿ.ಕೂಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ್ ಶೆಟ್ಟಿ, ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮೈಸೂರು ಪ್ರಾದೇಶಿಕ ವಿಭಾಗದ ಆಯುಕ್ತರಾದ ಶ್ರೀಮತಿ ಜಯಂತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಪಶ್ಚಿಮ ವಲಯ ಐ ಜಿ ಪಿ ಗೋಪಾಲಕೃಷ್ಣ ಹೊಸೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.