ಮಂಗಳೂರು,ನವೆಂಬರ್.05: ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ ಒಟ್ಟು 982 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ 777 ಫಲಾನುಭವಿಗಳ ಅರ್ಜಿಗಳು ಬ್ಯಾಂಕುಗಳಲ್ಲಿ ಬಾಕಿ ಇದ್ದು, ಈ ಅರ್ಜಿಗಳನ್ನು ಪುರಸ್ಕರಿಸಿ ತಕ್ಷಣವೇ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅವರು ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚಿಸಿದರು. ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿ ಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನವೆಂಬರ್ ಅಂತ್ಯದೊಳಗೆ ಶೇಕಡ 75 ಪ್ರಗತಿ ದಾಖಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು, ಜಿಲ್ಲೆಯ ಎಲ್ಲ ಬ್ಯಾಂಕ್ ಮ್ಯಾನೇಜರ್ ಜೊತೆ ಸಮನ್ವಯ ಸಾಧಿಸಿ ಪ್ರಗತಿ ದಾಖಲಿಸಬೇಕೆಂದು ಜಿಲ್ಲೆಯ ಲೀಡ್ ಬ್ಯಾಂಕ್ ಅಧಿಕಾರಿಗಳು ಏನೆಲ್ಲ ಅಗತ್ಯ ಮಾಹಿತಿ ಬೇಕೆಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಬೇಕು; ಈ ಮಾಹಿತಿಯನ್ನು ಎಲ್ಲ ಮುಖ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ತಿಳಿಸಿ ತಕ್ಷಣ ಕಾರ್ಯೋನ್ಮುಖರಾಗಬೇಕು ಸೂಚಿಸಿದರು.
ಸಭೆಯಲ್ಲಿ ಉತ್ತರಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಅನುಮೋದನೆ ಪಡೆದ ಯೋಜನೆ ಪ್ರತಿ, ಖಾತಾ ಅಥವಾ ಆರ್ ಟಿ ಸಿ, ಇನ್ ಕಂ ಸರ್ಟಿಫಿಕೇಟ್ ಕೊಡಬೇಕು. ಆದರೆ ಸಾಲ ನೀಡಲು ಆದಾಯ ಪ್ರಮಾಣ ಪತ್ರ ಮಾನದಂಡ ವಾಗುವುದಿಲ್ಲ ಎಂಬುದನ್ನು ಸಭೆಗೆ ತಿಳಿಸಿದರು.
ನೀರಿನ ತೆರಿಗೆ, ವಾಣಿಜ್ಯ, ಉದ್ಯಮ ತೆರಿಗೆ ವಸೂಲಾತಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಗುರಿ ಸಾಧಿಸದ ಅಧಿಕಾರಿಗಳಿಗೆ ಮುಂದಿನ ತಿಂಗಳೊಳಗೆ ನಿಗದಿತ ಗುರಿ ಸಾಧಿಸಬೇಕೆಂದು ತಾಕೀತು ಮಾಡಿದರು. ನೀರಿನ ಬಿಲ್ ಪಾವತಿಸದವರಿಗೆ ಸಂಪರ್ಕ ಕಡಿತ ಮಾಡಿ ವರದಿ ನೀಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಘನ ತ್ಯಾಜ್ಯ ವಿಲೇ ಯಲ್ಲಿ ಆದ ಪ್ರಗತಿ ಬಗ್ಗೆ, ಎಲ್ಲಾ ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಒಂದು ಉದ್ಯಾನವನ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿಯವರಿಗೆ ನಿವೇಶನ ಗುರುತಿಸುವಲ್ಲಿ ಲೋಪವಾದರೂ ಅದು ದೌರ್ಜನ್ಯಕ್ಕೆ ಸಮ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಾಕತ್ ರಾವ್ ಸ್ವಾಗತಿಸಿದರು. ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.