Friday, December 10, 2010

ಜಿ.ಪಂ., ತಾ.ಪಂ. ಚುನಾವಣೆ ಡಿ.13ರಿಂದ ನಾಮಪತ್ರ ಸಲ್ಲಿಕೆ, 31ರಂದು ಮತದಾನ

ಮಂಗಳೂರು,ಡಿಸೆಂಬರ್ 10: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 35 ಜಿ.ಪಂ.ಕ್ಷೇತ್ರಗಳು ಹಾಗೂ 129 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಡಿ.13ರ ಪೂರ್ವಾಹ್ನ 11ಗಂಟೆಯಿಂದ ನಾಮಪತ್ರ ಸ್ವೀಕರಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸುಬೋಧ್ ಯಾದವ್ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.ಡಿ.20 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.21ರಂದು ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.31ರಂದು ಪೂರ್ವಾಹ್ನ 7ರಿಂದ ಸಂಜೆ 5ರ ತನಕ ಚುನಾವಣೆ ನಡೆಯಲಿದೆ. ಜ.4ರಂದು ಪೂರ್ವಾಹ್ನ 8 ಗಂಟೆಯಿಂದ ಮತ ಎಣಿಕೆ ನಡೆಯುವುದಾಗಿ ಅವರು ವಿವರಿಸಿದರು.
ಜಿ.ಪಂ. ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಹಾಯಕ ಕಮಿಷನರ್ ಕಚೇರಿ ಮಂಗಳೂರು, ತಾಲೂಕು ಕಚೇರಿ ಬಂಟ್ವಾಳ, ತಾಲೂಕು ಕಚೇರಿ ಬೆಳ್ತಂಗಡಿ, ಸಹಾಯಕ ಕಮಿಷನರ್ ಕಚೇರಿ ಪುತ್ತೂರು ಮತ್ತು ತಾಲೂಕು ಕಚೇರಿ ಸುಳ್ಯ ಇಲ್ಲಿ ಪೂರ್ವಾಹ್ನ 11ರಿಂದ ಅಪರಾಹ್ನ 3 ಗಂಟೆಯ ಮಧ್ಯೆ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.ಮಂಗಳೂರು ತಾ.ಪಂ.ಗೆ ನಾಮಪತ್ರಗಳನ್ನು ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರ ಕಚೇರಿ ಮಂಗಳೂರು, ಸಹಾಯಕ ಕಾರ್ಯದರ್ಶಿ ಅವರ ಕಚೇರಿ ದ.ಕ.ಜಿ.ಪಂ., ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶ ಇಲ್ಲಿ ಸ್ವೀಕರಿಸಲಾಗುವುದು. ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿ ಮತ್ತು ತಾಲೂಕು ಪಂಚಾಯತ್ ಸಭಾಂಗಣ ಬಂಟ್ವಾಳ ಇಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯ ತಾ.ಪಂ. ನಾಮಪತ್ರ ಸ್ವೀಕರಿಸಲಾಗುವುದು. ಬೆಳ್ತಂಗಡಿ ತಾಲೂಕಿನ ತಾ.ಪಂ.ನ ನಾಮಪತ್ರಗಳನ್ನು ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ಆ ತಾಲೂಕಿನ ತಾ.ಪಂ.ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಸುಳ್ಯ ತಾ.ಪಂ. ನಾಮಪತ್ರಗಳನ್ನು ಅದೇ ತಾಲೂಕಿನ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ಸುಬೋಧ್ ಯಾದವ್ ತಿಳಿಸಿದರು.ಡಿ.31ರಂದು ನಡೆಯುವ ಚುನಾವಣೆಯಲ್ಲಿ 9,34,143 ಮಂದಿ ನಾಗರಿಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ 4,65,138 ಪುರುಷರಾದರೆ, 4,69,005 ಮಹಿಳೆಯರು. ಜಿಲ್ಲೆಯಲ್ಲಿ 1027 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಪೈಕಿ 233 ಸೂಕ್ಷ್ಮ ಹಾಗೂ 174 ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿ.ಪಂ. ಚುನಾವಣಾ ಅಧಿಕಾರಿಗಳು:
ಜಿ.ಪಂ. ಚುನಾವಣಾ ಅಧಿಕಾರಿಗಳಾಗಿ ಮಂಗಳೂರಿಗೆ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು, ಬಂಟ್ವಾಳಕ್ಕೆ ಮಂಗಳೂರು ಸಹಾಯಕ ಕಮೀಷನರ್, ಬೆಳ್ತಂಗಡಿಗೆ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ, ಪುತ್ತೂರಿಗೆ ಪುತ್ತೂರು ಸಹಾಯಕ ಕಮಿಷನರ್, ಸುಳ್ಯಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚುನಾವಣಾ ಅಧಿಕಾರಿಗಳಾಗಿರುತ್ತಾರೆ.
ತಾ.ಪಂ. ಚುನಾವಣಾ ಅಧಿಕಾರಿಗಳು:
ಮಂಗಳೂರು ತಾಲೂಕಿಗೆ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಮಂಗಳೂರು ತಾ.ಪಂ., ಜಿ.ಪಂ. ಸಹಾಯಕ ಕಾರ್ಯದರ್ಶಿ, ಧಾರ್ಮಿಕ ದತ್ತಿ ತಹಶೀಲ್ದಾರರು, ಬಂಟ್ವಾಳಕ್ಕೆ ಬಂಟ್ವಾಳ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಚುನಾವಣಾ ಅಧಿಕಾರಿಗಳಾಗಿರುತ್ತಾರೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರು, ಪುತ್ತೂರು ತಾಲೂಕಿಗೆ ಪುತ್ತೂರಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಎಪಿಎಂಸಿ ಕಾರ್ಯದರ್ಶಿ ಹಾಗೂ ಸುಳ್ಯಕ್ಕೆ ಸುಳ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚುನಾವಣಾ ಅಧಿಕಾರಿಯಾಗಿರುತ್ತಾರೆ ಎಂದು ಸುಬೋಧ್ ಯಾದವ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.