ಮಂಗಳೂರು,ಅ.14:ಬೆಳಕಿನ ಹಬ್ಬ ದೀಪಾವಳಿ ಬಾಳನ್ನು ಬೆಳಗಲಿ.ಬದುಕಿನ ಕತ್ತಲನ್ನು ಮಾಯವಾಗಿಸಿ ಬಾಳನ್ನು ಬೆಳಗುವ ಶುಭ ಸಂದರ್ಭದಲ್ಲಿ ಅತಿಯಾದ ಪಟಾಕಿಗಳ ಸಿಡಿಸುವಿಕೆ ಹಾಗೂ ಬಾಣ ಬಿರುಸುಗಳನ್ನು ಹೆಚ್ಚಾಗಿ ಬಳಸುವುದರಿಂದ ಶಬ್ದ ಹಾಗೂ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.ದೀಪಾವಳಿ ಕಾಲದ ಬೆಳಕಿನ ಹಾವಳಿಯ ಬಗ್ಗೆ ನಡೆಸಿದ ಸಮೀಕ್ಷೆಗಳ ಪ್ರಕಾರ ಮಾಪನ ಮಾಡಿರುವ ಶಬ್ದದ ಮಟ್ಟ ನಿಗದಿ ಪಡಿಸಿದ ಮಟ್ಟಕ್ಕಿಂತ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಿದೆ.ಪಟಾಕಿಗಳನ್ನು ಸಿಡಿಸುವಾಗ ಸರಿಯಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳದೆ ದೀಪಾವಳಿಯ ಮರುದಿನ ಬೆಂಕಿಯಿಂದ ಸಂಭವಿಸಿದ ಅನಾಹುತ, ಕಣ್ಣು ಕಳಕೊಂಡವರ ಚಿತ್ರಗಳು ಸುದ್ದಿಯಾಗಿರುತ್ತದೆ. ಹಾಗಾಗಿ ಜಿಲ್ಲಾಡಳಿತ ಸಾರ್ವಜನಿಕರ ಹಿತರಕ್ಷಣೆಯನ್ನು ಗಮನದಲ್ಲಿರಿಸಿ ಅನಾಹುತಗಳ ಕಡಿವಾಣಕ್ಕೆ, ಶಬ್ದ ಹಾಗೂ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಅನುಸರಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ವಿನಂತಿಸಿದ್ದಾರೆ.
ಮಾರ್ಗಸೂಚಿ: 4 ಮೀಟರ್ ಅಂತರದಲ್ಲಿ 125 ಡೆಸಿಬಲ್ ಮಟ್ಟಕ್ಕಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳ ಉತ್ಪಾದನೆ,ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. ಇಂತಹ ಪಟಾಕಿಗಳನ್ನು ಸಿಡಿಸದಿರಲು ಮನವಿ ಮಾಡಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಪಟಾಕಿಗಳ ಸಿಡಿಸುವಿಕೆಯನ್ನು ನಿಷೇಧಿಸಲಾಗಿದೆ.
ಪ್ರಶಾಂತ ಪ್ರದೇಶದಲ್ಲಿ ಪಟಾಕಿಗಳನ್ನು ಸಿಡಿಸಬಾರದು. (ಆಸ್ಪತ್ರೆ,ನ್ಯಾಯಾಲಯಗಳ ಬಳಿ), ಪಟಾಕಿಗಳ ಬಳಕೆಯನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಗೂ ಖಾಲಿ ಪ್ರದೇಶದಲ್ಲಿ ಮಾಡತಕ್ಕದ್ದು. ಪಟಾಕಿ ಮಾರಾಟಗಾರರು ಹೆಚ್ಚು ಶಬ್ದ ಉಂಟುಮಾಡುವಂತಹ ಪಟಾಕಿಗಳಾದ ಲಕ್ಷ್ಮೀ, ಆನೆ ಗುರುತಿನ ಪಟಾಕಿ ಹಾಗೂ ಇತರೆ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಉಂಟು ಮಾಡುವಂತಹ ಪಟಾಕಿಗಳನ್ನು ಮಾರಾಟ ಮಾಡಬಾರದು. ನಗರ ಮತ್ತು ಪಟ್ಟಣಗಳ ಚಿಕ್ಕ ಚಿಕ್ಕ ಬೀದಿಯಲ್ಲಿ ಪಟಾಕಿ ಹಾಗೂ ಬಾಣ ಬಿರುಸು ಮಾಡುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಫೋಟದಿಂದ ಅಪಾಯಗಳು ಆಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಊರ್ವ ಮೈದಾನ, ಕದ್ರಿ ಮೈದಾನ ತೇಜಸ್ವಿನಿ ನರ್ಸಿಂಗ್ ಹೋಮ್ ಹತ್ತಿರ, ಪದವು ಶಾಲೆ ಮೈದಾನ ಕದ್ರಿ ಗುಡ್ಡ, ಕೆಪಿಟಿ ಹತ್ತಿರ, ಮಾರ್ನಮಿ ಕಟ್ಟೆ ಮೈದಾನ,ವಾಮನ ನಾಯಕ್ ವಾಚ್ ಫ್ಯಾಕ್ಟರಿ ಎದುರು, ಎಮ್ಮೆಕೆರೆ ಮೈದಾನ,ಬೋಳಾರದ ಹತ್ತಿರ, ಭಾರತ್ ಮೈದಾನ, ಜೆಪ್ಪು ಮಾರ್ಕೆಟ್ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದೆ.