ಮಂಗಳೂರು,ಅ.31:ರಾಜ್ಯ ಸರ್ಕಾರದ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ;ಸಮಸ್ಯೆಗಳು ಶೀಘ್ರ ನಿವಾರಣೆಯಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಪೊಲೀಸ್ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಹೈಕಮಾಂಡ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜೇಟ್ಲಿ ಅವರು ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದರು. 750 ಕೋಟಿ ರೂ.ಗಳಲ್ಲಿ ಉತ್ತರ ಕರ್ನಾಟಕದಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರಾಶ್ರಿತರ ಹಳ್ಳಿಗಳ ಸ್ಥಳಾಂತರಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.
ಅಧಿಕಾರಕ್ಕಂಟಿರಬೇಕೆಂಬ ಆಸೆ ನನಗಿಲ್ಲ; ಜನಸೇವೆಗೆ ಕಂಕಣ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸುಬ್ರಮಣ್ಯ ದೇವಳದ ಕಾಮಗಾರಿ ವೀಕ್ಷಣೆ ಮತ್ತು ದೇವರ ದರ್ಶನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ,ನವೆಂಬರ್ 1ರಿಂದ ನಾಲ್ಕು ದಿನಗಳ ಉತ್ತರಕನ್ನಡದಲ್ಲಿ ನೆರೆ ಪೀಡಿತರಿಗೆ ಶಾಶ್ವತ ನೆಲೆ ಕಲ್ಪಿಸಲು ಶಂಕುಸ್ಥಾಪನೆ ಕಾಮಗಾರಿಗಳಲ್ಲಿ ಭಾಗವಹಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಈ ಸಂಬಂಧ ಶೀಘ್ರವೇ ದೆಹಲಿಗೆ ಭೇಟಿ ನೀಡಿ ಪ್ರಧಾನಿ ಹಾಗೂ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು.
ನೆರೆ ಸಂತ್ರಸ್ತರಿಗೆ ಬದುಕು ಕಲ್ಪಿಸುವುದಕ್ಕೆ ಪ್ರಥಮ ಆದ್ಯತೆ ಎಂಬುದನ್ನು ಪುನರುಚ್ಛರಿಸಿದ ಅವರು, ಹೈಕಮಾಂಡ್ ನಿರ್ದೇಶನದಂತೆ ಭಿನ್ನಾಭಿಪ್ರಾಯಗಳ ಬಗ್ಗೆ ಮಾಧ್ಯಮದೊಂದಿಗೆ ಚರ್ಚಿಸಲಾರೆ ಎಂದರು.