ಮಂಗಳೂರು,ಅ.8:ರಾಜ್ಯದಲ್ಲ್ಲಿ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ಎಲ್ಲರೂ ಧಾರಾಳವಾಗಿ ಸಹಾಯಹಸ್ತ ಚಾಚಿದ್ದು,ದಾನಿಗಳು ನಗದು ಹಾಗೂ ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿ ನಿರೀಕ್ಷೆಗೆ ಮೀರಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾದ್ಯಮಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು. ಇಂದು ಮುಂಜಾನೆ ತಮ್ಮ ನೇತೃತ್ವದಲ್ಲಿ ನಡೆದ ದೇಣಿಗೆ ಸಂಗ್ರಹ ಪಾದಯಾತ್ರೆಯಲ್ಲಿ 27,54,583 ರೂ. ಸಂಗ್ರಹಿಸಲಾಗಿದ್ದು, ಅ.5 ರಿಂದ 8 ರವರೆಗೆ ಜಿಲ್ಲಾಡಳಿತ ಒಟ್ಟು 1,74,83,727 ರೂ.ಗಳ ದೇಣಿಗೆ ಸಂಗ್ರಹಿಸಿದೆ ಎಂದು ಹೇಳಿದರು. ಜಿಲ್ಲೆಯ ಸಂಘ ಸಂಸ್ಥೆಗಳು, ದೇವಾಲಯಗಳು ಮತ್ತು ಸಾರ್ವಜನಿಕ ವಲಯದಿಂದ ಇನ್ನಷ್ಟು ನೆರವನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರಮುಖ ಕಂಪೆನಿಗಳಾದ ಎಂ ಆರ್ ಪಿಎಲ್ 50 ಲಕ್ಷ, ನಗರಪಾಲಿಕೆ 15 ರಿಂದ 20 ಲಕ್ಷ, ಡಿಸಿಸಿ ಬ್ಯಾಂಕ್ ಸೇರಿದಂತೆ ಸಹಕಾರಿ ಕ್ಷೇತ್ರದ ಬ್ಯಾಂಕ್ ಗಳಿಂದ ಒಂದು ಕೋಟಿ ರೂ.,ಎಂಎಸ್ಇಝಡ್ 5 ಲಕ್ಷ, ಭಾರತ್ ಬೀಡೀಸ್ 5 ಲಕ್ಷ, ಶರವು ದೇವಾಲಯ 2 ಲಕ್ಷ ರೂ.ನಗದು ನೆರವನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಡರ್ಸ್ ಅಸೋಸಿಯೇಷ್ ನ ಆಶ್ರಯದಲ್ಲಿ ನೆರೆ ಸಂತ್ರಸ್ತರ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು. ಕಟೀಲು ಕ್ಷೇತ್ರದಿಂದ 7,000 ಸೀರೆ, ಆರೋಗ್ಯ ಇಲಾಖೆಯಿಂದ 17 ಕ್ವಿಂಟಾಲ್ ಅಕ್ಕಿಯನ್ನು ನೆರೆಪೀಡಿತರ ನೆರವಿಗೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕರಾವಳಿ ಪ್ರಾಧಿಕಾದ ಅಧ್ಯಕ್ಚ ಬಿ. ನಾಗರಾಜ ಶೆಟ್ಟಿ,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಯೋಗಿಶ್ ಭಟ್, ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸುದ್ದಿಗೋಷ್ಟಿಯಲ್ಲಿದ್ದರು.