ಮಂಗಳೂರು,ಅ.30:ಜಿಲ್ಲಾ ಮಟ್ಟದ ಸಹಾಯವಾಣಿ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳಿಗೆ 15 ದಿನಗಳೊಳಗಾಗಿ ಪರಿಹಾರ ಅಥವಾ ಸೂಕ್ತ ಉತ್ತರವನ್ನು ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಹಾಯವಾಣಿ ಸಭೆಯಲ್ಲಿ 13 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಮಾತನಾಡಿದ ಅವರು, ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯವಾಣಿ ಸಭೆಯನ್ನು ಏರ್ಪಡಿಸಲಾ ಗುವುದು;ಇಂದಿನ ಸಭೆ ಈ ನಿಟ್ಟಿನಲ್ಲಿ ಪ್ರಥಮ ಸಭೆಯಾಗಿದ್ದು, ಇಲ್ಲಿ ಸ್ವೀಕರಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೆಮ್ಮಾಜೆ ಶ್ರೀನಿವಾಸ್ ಭಟ್ ಅವರು ಪಿಎಮ್ ಜಿಎಸ್ ಯೋಜನೆಯಡಿ ಮೋರಿ ನಿರ್ಮಿಸಿದ್ದರಿಂದ ಸಂಪೂರ್ಣ ಜಮೀನು ಪಾಳುಬಿದ್ದ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ರಾಬರ್ಟ ಡಿ ಸೋಜಾ ಎಂಬವರು ಆರ್ ಟಿಸಿ ಯಲ್ಲಿ 4 ಸೆನ್ಸ್ ಭೂಮಿ ನಾಪತ್ತೆಯಾದ ಬಗ್ಗೆ ಅಹವಾಲು ನೀಡಿದರು. ಆರ್ ಟಿಸಿ ಯನ್ನು ಪ್ರತಿವರ್ಷ ಪರಿಶೀಲಿಸುವುದರಿಂದ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಪರಜಿಲ್ಲಾಧಿಕಾರಿಗಳು ಸಲಹೆ ಮಾಡಿದರಲ್ಲದೆ ಸೂಕ್ತ ಕ್ರಮದ ಭರವಸೆ ನೀಡಿದರು.
ಮನೆ ನಂಬರ್, ಶಾಲಾ ಕಟ್ಟಡ, ಜಾಗ ಒತ್ತುವರಿಯಂತಹ ಕಂದಾಯ ಇಲಾಖೆಗೆ ಸೇರಿದ 13 ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮದ ಭರವಸೆಯನ್ನು ಅಧಿಕಾರಿಗಳು ನೀಡಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.