ಮಂಗಳೂರು,ಅ.28:ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವಂತೆ ಮಾನವಶಕ್ತಿಯನ್ನು ಬಳಸಲು ಕೌಶಲ್ಯಯುಕ್ತ ಮಾನವಶಕ್ತಿ ಒದಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ಹೇಳಿದರು.
ಅವರು ಇಂದು ಲಾಲ್ ಬಾಗ್ ನ ಮಹಾನಗರ ಪಾಲಿಕೆ ಕಟ್ಟಡದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಉದ್ಘಾಟನಾ ಸಂದೇಶ ನೀಡಿದರು. ಉದ್ಯೋಗ ವಿನಿಮಯ ಕೇಂದ್ರಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಮೆ. ಟೀಮ್ ಲೀಸ್ ಸರ್ವೀಸಸ್ ಪ್ರೈ ಲಿ.ನ ಸಹಭಾಗಿತ್ವದಲ್ಲಿ ಉದ್ಯೋಗಾಭಿವೃದ್ಧಿ, ಉದ್ಯೋಗಾಕಾಂಕ್ಷಿಗಳ ನೋಂದಣಿ, ಕೌಶಲ್ಯ ಮೌಲ್ಯಮಾಪನ, ಸಲಹೆ, ಉದ್ಯೋಗ ಮೇಳ, ಸಂದರ್ಶನಗಳನ್ನು ಏರ್ಪಡಿಸುವುದು, ಕೌಶಲ್ಯ ಕೊರತೆ ಗುರುತಿಸಿ ತರಬೇತಿ, ಉದ್ಯೋಗಾರ್ಹತೆ ಉತ್ತಮಗೊಳಿಸಿ ಉದ್ಯೋಗ ದೊರಕಿಸುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಮುಖ್ಯ ಕೆಲಸ ಎಂದು ಅವರು ವಿವರಿಸಿದರು.ಇದಕ್ಕಾಗಿ ಪ್ರಥಮವಾಗಿ ಶೈಕ್ಷಣಿಕ ನಗರ ಎಂದು ಬಿಂಬಿತವಾಗಿರುವ ಮಂಗಳೂರಿನಲ್ಲಿ ಈ ಕೇಂದ್ರವನ್ನು ಆರಂಭಿಸಿದ್ದು, ಮುಂದಿನ ತಿಂಗಳಲ್ಲಿ ಬಿಜಾಪುರ ಮತ್ತು ಗುಲ್ಬರ್ಗಾಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು; ಮುಂದೆ ಹಂತ ಹಂತವಾಗಿ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.ಈಗಾಗಲೇ ಉದ್ಯೋಗ ಮೇಳದಲ್ಲಿ ಒಂದೂವರೆ ಲಕ್ಷ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, 75,000 ಜನಕ್ಕೆ ಉದ್ಯೋಗ ದೊರೆತಿದೆ ಇನ್ನು ಉಳಿದವರಿಗೆ ತರಬೇತಿ ನೀಡಲಾಗಿದೆ. ಸರ್ಕಾರದ ಐಟಿಐಗಳ ಶಿಕ್ಷಣಕ್ಕೆ ಹೆಚ್ಷಿನ ಒತ್ತು ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ:
ಬದುಕು ರೂಪಿಸಲು ಕಲಿಸುವ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ರಾಜ್ಯದ 500 ಹಾಸ್ಟೆಲ್ ಗಳಲ್ಲಿ 100 ಹಾಸ್ಟೆಲ್ ಗಳನ್ನು ಪ್ರಥಮವಾಗಿ ಆಯ್ಕೆ ಮಾಡಿ ಪ್ರತಿ ದಿನ ಒಂದು ಗಂಟೆಯಂತೆ ಉದ್ಯೋಗಾಧಾರಿತ ಶಿಕ್ಷಣ ನೀಡಲು ಯೋಜಿಸಲಾಗಿದೆ; 5 ವರ್ಷಕ್ಕೆ 10ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯಂತೆ ಈಗಾಗಲೇ 2ಲಕ್ಷ ಉದ್ಯೋಗಗಳನ್ನು ನೀಡಲಾಗಿದೆ.ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲು ಹಣಕಾಸಿನ ಕೊರತೆಯಿಲ್ಲ ಎಂದು ಅವರು ಸ್ಷಷ್ಟ ಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು, ಯುವ ಜನಾಂಗ ಸರ್ಕಾರದ ಕೆಲಸವನ್ನೇ ಕಾಯದೆ ತಮ್ಮ ಪ್ರತಿಭೆಯನ್ನು ಕೌಶಲ್ಯ ತರಬೇತಿಗಳಿಂದ ಉತ್ತಮ ಪಡಿಸಿಕೊಂಡು ಬದುಕು ರೂಪಿಸಿ ಎಂದು ಸಲಹೆ ಮಾಡಿದರು. ಸರ್ಕಾ ಎಲ್ಲ ವರ್ಗದ ಹಾಗೂ ಮಟ್ಟದ ಜನರಿಗೋಸ್ಕರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರ ಸದ್ಬಳಕೆಯಾಗಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ನೂತನ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ,ಉದ್ಯೋಗ ಸೃಷ್ಠಿ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಧ್ಯೇಯವಾಗದೆ ಸ್ವ ಉದ್ಯೋಗ ತರಬೇತಿಗಳಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ ಎಂದರು.ಫಾರ್ಮಲ್ ಎಜುಕೇಶನ್ ಮತ್ತು ತರಬೇತಿ ಪಡೆಯದವರಿಗೂ ಈ ಕೇಂದ್ರಗಳು ನೆರವಾಗುವಂತಿರಬೇಕೆಂಬ ಸಲಹೆಯನ್ನು ನೀಡಿದರು. ಶಾಸಕ ಯು ಟಿ ಖಾದರ್,ಟೀಮ್ ಲೀಸ್ ನ ವ್ಯವಸ್ಥಾಪಕ ಅಶೋಕ್ ರೆಡ್ಡಿ ಮಾತನಾಡಿದರು. ಮಹಾಪೌರ ಎಂ. ಶಂಕರ್ ಭಟ್, ಕಮಿಷನರ್ ವಿಜಯಪ್ರಕಾಶ್ ಉಪಸ್ಥಿತರಿದ್ದರು. ಉದ್ಯೋಗ ಮತ್ತು ತರಬೇತಿ ಆಯುಕ್ತ ಎಸ್ ಆರ್ ಉಮಾಶಂಕರ್ ಸ್ವಾಗತಿಸಿದರು. ಕೆವಿಟಿಎಸ್ ಡಿಸಿ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಷ್ಣುಕಾಂತ್ ಎಸ್ ಚಟಪಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉದ್ಯೋಗಾಧಿಕಾರಿ ಎಚ್ ಟಿ ಬಸವರಾಜ್ ವಂದಿಸಿದರು.ಸಮಾರಂಭದಲ್ಲಿ 12 ಅಭ್ಯರ್ಥಿಗಳಿಗೆ ಕೌಶಲ್ಯ ಮೌಲ್ಯಮಾಪನ ಸರ್ಟಿಫಿಕೇಟ್ ಮತ್ತು ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.