ಮಂಗಳೂರು, ಜೂ. 12: ಜನರ ಬಹಳಷ್ಟು ನಿರೀಕ್ಷೆಗಳೊಂದಿಗೆ ನಮ್ಮನ್ನು ಆರಿಸಿದ್ದು, ಅವರ ನಿರೀಕ್ಷೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು
ಹೇಳಿದರು.ಇಂದು ನಗರದ ಟಿ ಎಂ ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ವಿಕಾಸಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸವಲತ್ತುಗಳ ವಿತರಣೆಯಲ್ಲಿ, ಫಲಾನುಭವಿಗಳನ್ನು ಗುರುತಿಸುವಲ್ಲಿ, ಪ್ರತಿಯೊಬ್ಬರ ಹಿತವನ್ನು ಗಮನದಲ್ಲಿರಿಸಿ ಯೋಜನೆಗಳನ್ನು ರೂಪಿಸುವುದರಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು, ಕಾರ್ಯದ ವೇಗವವನ್ನು ತ್ವರಿತ ಗೊಳಿಸಲು ಹೋಬಳಿ ಮಟ್ಟಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಆಡಳಿತದಲ್ಲಿ, ಯೋಜನೆಗಳ ಅನುಷ್ಠಾನದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದ್ದು, ಮಂಗಳೂರು ನಗರದ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ನೀಡಲಾಗಿದೆ. ರೈತ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸ್ತ್ರೀ ಸಬಲೀಕರಣಕ್ಕೆ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ರೂಪಿಸಲು, ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ಕೋಟಿ 20 ಲಕ್ಷ ಜನರಿಗೆ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ವಿತರಿಸಲಾಗಿದೆ. 28 ಲಕ್ಷ ಜನಕ್ಕೆ ಪಡಿತರ ಚೀಟಿ ವಿತರಿಸಲಾಗಿದೆ. ರಾಜ್ಯ ವಿದ್ಯುತ್ ಬರದಿಂದ ಮುಕ್ತವಾಗಲು ಮತ್ತು ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡಲು ಸಬಲವಾಗುವಷ್ಟು ಇಂಧನ ಸಂಬಂಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಗೃಹ ಸಚಿವ ಶ್ರೀ ವಿ. ಎಸ್. ಆಚಾರ್ಯ, ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜೆ. ಕೃಷ್ಣ ಪಾಲೇಮಾರ್, ವಿಧಾನ ಸಭೆಯ ಮುಖ್ಯ ಸಚೇತಕ ಶ್ರೀ ಡಿ. ಎನ್. ದೇವರಾಜ್, ಉಡುಪಿ- ಚಿಕ್ಕಮಗಳೂರು ಸಂಸದ ಡಿ.ವಿ. ಸದಾನಂದ ಗೌಡ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ , ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾಗಿರುವ ಶ್ರೀ ವಿ. ಧನಂಜಯ ಕುಮಾರ್, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮಂಗಳೂರು ಮಹಾಪೌರ ಶ್ರೀ ಎಂ. ಶಂಕರ್ ಭಟ್ , ರಾಜ್ಯ ಮುಖ್ಯ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಮಾತನಾಡಿದರು. ದ. ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಶ್ರೀ ಎನ್. ಯೋಗೀಶ್ ಭಟ್ ವಹಿಸಿದ್ದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಎಂ. ವಿ. ಜಯಂತಿ, ದ. ಕ. ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್, ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪಿ. ಹೇಮಲತಾ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀ ಆರ್. ನಾರಾಯಣ ಸ್ವಾಮಿ ಸೇರಿದಂತೆ ಮೂರು ಜಿಲ್ಲೆಯ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.