ಮಂಗಳೂರು, ಜೂ.30: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಿ.ಸಿ.ರೋಡಿನಿಂದ ಮಂಗಳೂರುವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸುವ ಉದ್ದೇಶದಿಂದ ಇಂದಿನಿಂದ ಜುಲೈ 28ರವರೆಗೆ ವಾಹನವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿಗಳಾಗಿರುವ ಶ್ರೀ ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.
ಅತಿ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಬಿ. ಸಿ. ರೋಡಿನಲ್ಲಿ ಇರ್ಕಾನ್ ಕಂಪೆನಿಯವರು ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ವಿಳಂಬ ಮಾಡಿರುವ ಕಾರಣ ಮೂಡಿಬಂದ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಈ ಆದೇಶವನ್ನು ಹೊರಡಿಸಲಾಗಿದ್ದು, ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಇರ್ಕಾನ್ ಕಂಪೆನಿಯ ಅಡಿಷನಲ್ ಜನರಲ್ ಮ್ಯಾನೇಜರ್ ಸುರೇಶ್ ಕುಮಾರ್ ಅವರು 7ರಿಂದ 10ದಿನಗಳೊಳಗಾಗಿ(ಡ್ರೈಡೇಸ್) 200 ಮೀಟರ್ ಸರ್ವಿಸ್ ರಸ್ತೆಯನ್ನು ನಿರ್ಮಿಸುವುದಾಗಿ ಹೇಳಿದರು. ನಂತರದ 30ದಿನಗಳಲ್ಲಿ ರಾತ್ರಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸುವ ಚಿಂತನೆ ಮಾಡಿದ್ದು, ಮೆಸ್ಕಾಂ, ಭೂಸ್ವಾಧೀನ ಅಧಿಕಾರಿ, ಬಿ ಎಸ್ ಎನ್ ಎಲ್, ತಹಸೀಲ್ದಾರರು ಈ ಶನಿವಾರದೊಳಗೆ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಬೇಕೆಂದು ಶ್ರೀ ನಾಗರಾಜ್ ಶೆಟ್ಟಿ ಅವರು ಸೂಚನೆ ನೀಡಿದರು.
ಕಾಮಗಾರಿ ವಿಳಂಬದ ಬಗ್ಗೆ ವಿವರಣೆಯನ್ನು ಕೇಳಿದ ಸಂಸದರು, ಜನರಿಗೆ ತೊಂದರೆಯಾಗದಂತೆ ಹೊಣೆಯರಿತು ಕರ್ತವ್ಯ ನಿರ್ವಹಿಸುವಂತೆ ಹೇಳಿದರಲ್ಲದೆ ಜನರ ವಿಶ್ವಾಸಕ್ಕೆ ಭಂಗ ತಾರದಂತೆ ತಿಂಗಳೊಳಗೆ ಕಾಮಗಾರಿ ಮುಗಿಸಲು ಸೂಚಿಸಿದರು.ಸಮಸ್ಯೆಗಳ ಆಳವನ್ನು ಸಂಪೂರ್ಣವಾಗಿ ಅಭ್ಯಸಿಸಿ ಜಿಲ್ಲಾಡಳಿತ ಮೇಲಿನ ಆದೇಶವನ್ನು ಹೊರಡಿಸಿತ್ತು; ಆದರೆ ಇರ್ಕಾನ್ ಕಂಪೆನಿ ಸರ್ವಿಸ್ ರಸ್ತೆ ಸಂಪರ್ಕ ನೀಡಲು ವಿಫಲವಾದ ಹಿನ್ನಲೆಯಲ್ಲಿ ಸಮಸ್ಯೆ ಉದ್ಭವವಾಗಿದ್ದು, ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಪರಿಸರದಲ್ಲಿ ಚತುಷ್ಪಥ ಕಾಮಗಾರಿಯನ್ನು 31.12. 2009ರೊಳಗೆ ಮುಗಿಸಲಾಗುವುದು ಎಂದು ಇರ್ಕಾನ್ ಅಧಿಕಾರಿಗಳು, ದ್ವಿಪಥ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಸಂಚಾರ ಮುಕ್ತಗೊಳಿಸುವುದಾಗಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ಜನರಿಗೆ ಕುಡಿಯುವ ನೀರು ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಕಾಮಗಾರಿ ಮುಗಿಸಲು ಮನವಿ ಮಾಡಿದರು.ಸಭೆಯಲ್ಲಿ ಶಾಸಕ ಶ್ರೀ ಯು ಟಿ. ಖಾದರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಇರ್ಕಾನ್ ನ ಬಸವರಾಜ್ ಸೇರಿದಂತೆ ಇಲಾಖಾಧಿಕಾರಿಗಳು, ಬಂಟ್ವಾಳ ತಹಸೀಲ್ದಾರ್ ಪಾಲ್ಗೊಂಡಿದ್ದರು.