ಮಂಗಳೂರು, ಜೂ. 2: ಅರಣ್ಯ ವೈವಿಧ್ಯ, ಜೀವಸಂಕುಲ, ಪರಿಸರ ಸಂರಕ್ಷಣೆಗೆ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಕಾಯಿದೆಗಳು ಹಾಗೂ ಯೋಜನೆಗಳ ಮೂಲಭೂತ ಉದ್ದೇಶ ಈಡೇರಲು ಸಾಧ್ಯ ಎಂದು ಪಶ್ಚಿಮಘಟ್ಟ ಸಂರಕ್ಷಣ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ಅನಂತಹೆಗಡೆ ಆಶೀಸರ ಹೇಳಿದರು.
ಜೂನ್ 1ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಮತ್ತು ಪರಿಸರಕ್ಕೆ ಸಂಬಂದಿಸಿದ ಇಲಾಖೆಗಳಾದ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ಜಲಾನಯನ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ವ್ಯವಸ್ಥೆಯಡಿ ಬರುವ ಸಾಮಾಜಿಕ ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಅರಣ್ಯ ಮತ್ತು ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಅವರು ನುಡಿದರು.
ಗ್ರಾಮೀಣ ಸಂಪರ್ಕ ಯೋಜನೆಗಳು ಅತ್ಯಗತ್ಯವಾಗಿದ್ದರೂ ಕಾಡುಗಳ ನಡುವೆ ಚತುಷ್ಪತ ರಸ್ತೆಯ ಅಗತ್ಯವಿಲ್ಲ; ಯೋಜನೆಗಳು ಜನರ ಅಗತ್ಯಗಳಿಗೆ ಪೂರಕವಾಗಿರಬೇಕು ಎಂದ ಅವರು, ಇಂತಹ ಯೋಜನೆಗಳ ಜಾರಿ ಸಂದರ್ಭದಲ್ಲಿ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿದರೆ ಯಾವುದೇ ಗೊಂದಲ ಅಥವಾ ವಿಳಂಬಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಕ್ರಿಯಾಶೀಲ ನ್ಯಾಯಾಂಗವೇ ಇಂದು ಹಲವು ಸಂದರ್ಬಗಳಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದ್ದು, ಇದು ನಮ್ಮ ಕಾರ್ಯವೈಖರಿಯ ಲೋಪವನ್ನು ತೋರುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸಿ ಜಿಲ್ಲಾಧಿಕಾರಿಗಳ ಸಹಕಾರದಿಂದ ಅರಣ್ಯ ನಾಶ, ಮಾಲಿನ್ಯ ನಿಯಂತ್ರಣವನ್ನು ತಡೆಯಲು ಸಾಧ್ಯ ಎಂದರು. ಜಲಾನಯನ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ವಾರ್ಷಿಕ ಗುರಿ ಮತ್ತು ಸಾಧನೆಯ ವಿವರವನ್ನು ಪಡೆದುಕೊಂಡ ಅವರು, ಯೋಜನೆಗಳ ಅನುಷ್ಠಾನದ ಸಂದರ್ಬದಲ್ಲಿ ಪ್ರಾದೇಶಿಕ ಪರಿಸರಕ್ಕೆ ಪೂರಕವಾಗಿ ಚಿಂತನೆ ನಡೆಸಿ ಯೋಜನೆ ಅನುಷ್ಠಾನಗೊಳಿಸುವಂತೆ ಸಲಹೆ ಮಾಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿ ರಚನೆಯಾಗಿದ್ದು, ಇವುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ತರಬೇತಿ, ದಾಖಲಾತಿ ಮತ್ತು ತಜ್ಞರಿಂದ ಮಾಹಿತಿ ಕಾರ್ಯಕ್ರಮ ರೂಪಿಸಿ, ಸಾಮಾಜಿಕ ಅರಣ್ಯ ಇಲಾಖೆ ಈ ಸಂಬಂಧ ಹೊಣೆ ಹೊರುವಂತೆ ಸೂಚಿಸಿದರು.
ಮಾಲಿನ್ಯ ನಿಯಂತ್ರಣ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಜಿಲ್ಲಾಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಅವರ ಮುಖಾಂತರ ಆದೇಶಗಳನ್ನು ಜಾರಿಗೊಳಿಸಬಹುದು ಎಂದು ನುಡಿದರು. ರಾಜ್ಯ ಸರ್ಕಾರ ಜನವರಿ 18ರಿಂದ ವೃಕ್ಷಾರೋಪಣ ಅಭಿಯಾನವನ್ನು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದು, ರಾಜ್ಯಾದಾದ್ಯಂತ ಈ ಅಭಿಯಾನ ಶಾಲಾ ಮಕ್ಕಳು, ಪರಿಸರ ಕ್ಲಬ್, ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರದಿಂದ ನಡೆಯಲಿದೆ.