ಮಂಗಳೂರು, ಜೂ. 24: ಸರ್ಕಾರದ ಯೋಜನೆಗಳು ಸಫಲವಾಗಬೇಕಾದರೆ ಸಮುದಾಯದ ಸಹಭಾಗಿತ್ವ ಅಗತ್ಯ. ಯೋಜನೆಗಳನ್ನು ಗ್ರಾಮ ಮಟ್ಟದಿಂದ ಅನುಷ್ಠಾನಕ್ಕೆ ತಂದರೆ ಮಾತ್ರ ಸಾಧನೆ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೇಕೋಡಿ ಅವರು ಹೇಳಿದರು.
ಅವರು 23ರಂದು ಪುತ್ತೂರಿನ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಸಭಾಭವನಲದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾದ ಸಮುದಾಯ ಆರೋಗ್ಯ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತರ ಇಲಾಖೆಗಳಿಗಿಂತ ಭಿನ್ನವಾಗಿ ಹೆಚ್ಚಿನ ಸೇವಾ ಮನೋಭಾವದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದ ಅವರು, ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಿಬ್ಬಂದಿಗಳು ಹೊಣೆಯರಿತು ಕಾರ್ಯನಿರ್ವಹಿಸಬೇಕು ಎಂದರು. ಮಾಹಿತಿಗಳನ್ನು ವಿಫುಲವಾಗಿ ನೀಡುವ ಮುಖಾಂತರ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಹೀರಾ ಬಿ. ಆರ್ ಅವರು ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜಾರಿಯಾದ ಬಳಿಕೆ ಇಲಾಖೆಯಿಂದ ಜನರಿಗೆ ಸಾಕಷ್ಟು ಸವಲತ್ತುಗಳು ಲಭ್ಯವಾಗಿದ್ದು, ಇದರ ಸದ್ಬಳಕೆಯಾಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಕುಮಾರನಾಥ ರೈ ಅವರು ಮಾತನಾಡಿ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು. ಜಿ. ಪಂ ಸದಸ್ಯರಾದ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ಸುಶೀಲ, ಶ್ರೀ ಸಂಜೀವ ರೈ ಪೇರಾಲು, ಶ್ರೀ ಕೃಷ್ಣ ಭಟ್, ಶ್ರೀ ಮಹಮ್ಮದ್ ಬಡಗನ್ನೂರು ಸೇರಿದಂತೆ ಇಲಾಖೆಯ ವಿವಿಧ ವಿಷಯಗಳಲ್ಲಿ ಪರಿಣತ ವೈದ್ಯರು ಸಭೆಯಲ್ಲಿ ಹೇರಳ ಮಾಹಿತಿಯನ್ನು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನವೂ ಏರ್ಪಾಡಾಗಿತ್ತು. ಈಶ್ವರಮಂಗಲದ ಜನಪ್ರಿಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ನಾಯಕ್ ಅವರು ವರದಿವಾಚನ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಸ್ವಾಗತಿಸಿದರು. ಈಶ್ವರಮಂಗಲದ ಆರೋಗ್ಯ ಸಹಾಯಕರಾದ ಶ್ರೀಮತಿ ಉಮಾವತಿ ಅವರನ್ನು ಸಂಘಟಕರು ಆತ್ಮೀಯವಾಗಿ ಸನ್ಮಾನಿಸಿದರು. ಜಯರಾಂ ಸುವರ್ಣ ವಂದಿಸಿದರು.