ಮಂಗಳೂರು, ಜೂ. 8: ರಾಜ್ಯದ ಗಡಿ ಭಾಗದಲ್ಲಿರುವ 57 ತಾಲೂಕುಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಯತ್ನಿಸಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶ್ರೀ ಚಂದ್ರಕಾಂತ್ ಗುರಪ್ಪ ಬೆಲ್ಲದ ಅವರು ಹೇಳಿದರು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡಲಾಗುವುದು ಎಂದ ಅವರು, ಗಡಿಯಲ್ಲಿರುವ ಕನ್ನಡದ ಪ್ರತಿಭಾವಂತ ಕಲಾವಿದರಿಗೆ ಅಗತ್ಯ ನೆರವುಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಕನ್ನಡಿಗರಿಗೆ ತಲುಪುವಂತೆ ಮಾಡಲು, ಡಾ. ನಂಜುಂಡಪ್ಪ ವರದಿಯನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಲಾಗುವುದು ಎಂದ ಅವರು, ಸರ್ಕಾರ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು. ಗೋಷ್ಠಿಯಲ್ಲಿ ಕನ್ನಡ ಪರ ಹೋರಾಟಗಾರ ಶಿವಶಂಕರ್, ವಿಶೇಷ ಅಧಿಕಾರಿ ಸಂಗಮೇಶ ಅವರು ಉಪಸ್ಥಿತರಿದ್ದರು.