Tuesday, August 13, 2013

ರಾಷ್ಟ್ರಧ್ವಜ_ ಜಿಲ್ಲಾಧಿಕಾರಿಗಳ ಸೂಚನೆ

ಮಂಗಳೂರು, ಆಗಸ್ಟ್.13:-ದೇಶದ ಸ್ವಾತಂತ್ರ್ಯದ ಸಂಕೇತವಾದ ತ್ರಿವರ್ಣ ರಾಷ್ಟ್ರ ಧ್ವಜವನ್ನು ಎಲ್ಲೆಂದರಲ್ಲಿ ಮನಬಂದಂತೆ ಹಾರಿಸುತ್ತಿರುವುದು ದಕ್ಷಿಣಕನ್ನಡ  ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ದಿನಾಂಕ 26-1-2002 ರಂದು ಜಾರಿಗೆ ಬಂದಿರುವ  ನಿಯಮಗಳಂತೆ ರಾಷ್ಟ್ರಧ್ವಜವನ್ನು ಹಾರಿಸಲು ಎಲ್ಲಾ ಭಾರತೀಯರಿಗೆ, ಖಾಸಗಿ ಸಂಘ ಸಂಸ್ಥೆಗಳಿಗೆ.ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಆದರೂ ಸಹ ರಾಷ್ಟ್ರಧ್ವಜಕ್ಕೆ ನೀಡಬೇಕಾದ ಗೌರವವನ್ನು ನೀಡಿ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ. ಅವರ ಸೂಚನೆಯಂತೆ ದಿನಾಂಕ 15-8-13 ರಂದು ಸೂರ್ಯೋದಯದ ನಂತರ ಹಾರಿಸಿದ ರಾಷ್ಟ್ರ ಧ್ವಜವನ್ನು ಸೂರ್ಯಾಸ್ತದ ಮೊದಲೇ ಇಳಿಸತಕ್ಕದ್ದು. ಹರಿದುಹೋದ,ಮಾಸಿದ,ಬಣ್ಣಹೋದ,ಕೊಳೆಯಾಗಿ ಸುಕ್ಕುಸುಕ್ಕಾದ ರಾಷ್ಟ್ರಧ್ವಜವನ್ನು ಹಾರಿಸಬಾರದು. ರಾಷ್ಟ್ರಧ್ವಜವನ್ನು ಸಾಮಾನ್ಯ ಬಟ್ಟೆಯೆಂದು ಬೇರೆ ಯಾವುದೇ ಉದ್ದೇಶಕ್ಕೆ  ಬಳಸಿದರೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗುತ್ತದೆ ಮತ್ತು ಅವರು ದಂಡನೆಗೆ ಅರ್ಹರಾಗುತ್ತಾರೆ.  ಪ್ಲಾಸ್ಟಿಕ್ ಧ್ವಜವನ್ನು ಬಳಸಬಾರದು. ಹಾರಿಸಿದ ರಾಷ್ಟ್ರಧ್ವಜವು ಸ್ಪಷ್ಟವಾಗಿ ಕಾಣುವಂತಿರಬೇಕು. ರಾಷ್ಟ್ರಧ್ವಜವನ್ನು ನೆಲಕ್ಕೆ ತಾಗಿಸಬಾರದು,ನೀರಿನಲ್ಲಿ ಬೀಳಿಸಬಾರದು.ಕರವಸ್ತ್ರ,ಟವೆಲ್,ಪ್ಯಾಕಿಂಗ್ ಸಾಮಾಗ್ರಿ ಮುಂತಾದ ಬಟ್ಟೆಗಳಲ್ಲಿ ರಾಷ್ಟ್ರಧ್ವಜವನ್ನು ಮುದ್ರಿಸಬಾರದು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕಠಿಣ ಸಜೆ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಆಗುತ್ತಿರುವುದನ್ನು  ಕಂಡುಬಂದರೆ, ಸಾರ್ವಜನಿಕರು ಕೂಡಲೇ ಹತ್ತಿರದ ಪೋಲೀಸ್ ಠಾಣೆಗೆ,ತಾಲೂಕು ಕಚೇರಿಗೆ, ಸಹಾಯಕ ಕಮೀಷನರ್ ಕಚೇರಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ಟಾಲ್ಫ್ರೀ ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ತಿಳಿಸಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.