

ಎರಡು ವರ್ಷದ ವರೆಗೆ ಅಥವಾ ಇನ್ನೂ ಹೆಚ್ಚು ದಿನ ಎದೆಹಾಲು ಕುಡಿಸು ವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎದೆ ಹಾಲುಣಿ ಸುವುದರಿಂದ ತಾಯಿಗೂ ಸಂತೃಪ್ತಿ ಹಾಗೂ ಸಮಾಧಾನ ದೊರೆಯುತ್ತದೆ. ರಕ್ತಸ್ರಾವ,ರಕ್ತ ಹೀನತೆಯನ್ನು ಎದೆಹಾಲುಣಿಸುವಿಕೆ ತಡೆಯುತ್ತದೆ. ತಾಯಿ ಹಾಗೂ ಮಗುವಿನ ಆರೋಗ್ಯ ವೃದ್ಧಿಗೆ ಎದೆಹಾಲುಣಿಸುವಿಕೆ ಪೂರಕ ಎಂಬುದು ಆರ್ ಸಿ ಹೆಚ್ ಡಾಕ್ಟರ್ ರುಕ್ಮಿಣಿ ಅವರು ಹೇಳುತ್ತಾರೆ.ಎದೆಹಾಲುಣಿಸುವಿಕೆ ಹಾಗೂ ಪೂರಕವಾಗಿ ಹತ್ತು ಮಾರ್ಗಸೂಚಿಗಳನ್ನು ಅಖಿಲ ಭಾರತೀಯ ಸ್ತನ್ಯಪಾನ ಪ್ರೋತ್ಸಾಹಿಸುವ ಸಂಘದವರು ನೀಡಿದ್ದು ತಾಯಿ, ಕುಟುಂಬ ಹಾಗೂ ಸಮಾಜ ಈ ನಿಟ್ಟಿನಲ್ಲಿ ಯಾವ ರೀತಿ ಸಹಕರಿಸಬೇಕೆಂಬ ಬಗ್ಗೆಯೂ ವಿವರವಾದ ಮಾಹಿತಿಗಳನ್ನು ನೀಡುತ್ತಾರೆ. ಮಗುವಿಗೆ ಆರು ತಿಂಗಳಾದ ಬಳಿಕವೂ ಮನೆಯಲ್ಲೇ ತಯಾರಿಸಿದ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ಪ್ರೋತ್ಸಾಹಿಸಬೇಕೆಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಶಿಫಾರಸ್ಸು ಮಾಡಿದೆ. ಎದೆಹಾಲುಣಿಸುವಿಕೆ ಬಗ್ಗೆ ನಿಜವನ್ನು ಅರಿಯಬೇಕು, ಪರ್ಯಾಯ ಉತ್ಪನ್ನಗಳಿಂದಾಗುವ ತೊಂದರೆಗಳನ್ನು ತಿಳಿಯಬೇಕು. ಜನರಿಗೆ ಸಾಕಷ್ಟು ಸರಿ ಮಾಹಿತಿಯನ್ನು ಈ ಕುರಿತು ನೀಡಬೇಕು. ನಿಯಮ ಉಲ್ಲಂಘನೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು.ಎಲ್ಲದಕ್ಕಿಂತ ಮುಖ್ಯವಾಗಿ ಮಗುವಿನ ಆರೋಗ್ಯಕ್ಕೆ ಎದೆಹಾಲು ಅತ್ಯುತ್ತಮ ಎಂಬುದನ್ನು ತಾಯಿಯಂದಿರು ಮನಗಾಣುವುದು ಅತ್ಯವಶ್ಯಕ.ಈ ಬಗ್ಗೆ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವವೇ ಆಗಸ್ಟ್ 3ರಿಂದ ಏಳು ದಿನಗಳ ಕಾಲ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುತ್ತಿದೆ. ನಗರದಲ್ಲಿ ಆಗಸ್ಟ್ 3 ರಂದು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್ ನಲ್ಲಿ ಬೆ. 11 ಗಂಟೆಗೆ ವಿಭಾಗೀಯ ಮಟ್ಟದ ಸಪ್ತಾಹಕ್ಕೆ ಚಾಲನೆ ದೊರೆಯಲಿದೆ.