ಮಂಗಳೂರು,ಆಗಸ್ಟ್ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಸಮಾಜ ಕಾರ್ಯಕರ್ತ ಶೀನ ಶೆಟ್ಟಿ ಅವರನ್ನು ಒಂಬುಡ್ಸ್ ಮೆನ್ ಆಗಿ ನೇಮಕಗೊಳಿಸಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಕಾರ್ಯಾ ಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಂಬುಡ್ಸ್ ಮೆನ್ ಆಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಶೀನ ಶೆಟ್ಟಿಯವರು, ಜಿಲ್ಲಾ ಪಂಚಾಯತ್ ನ ಎಲ್ಲಾ ಅಧಿಕಾರಿಗಳ ಸಹಕಾರದಿಂದ ಯೋಜನೆಯನ್ನು ಅರ್ಹರಿಗೆ ಪರಿಣಾಮ ಕಾರಿಯಾಗಿ ತಲುಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಕುಂದು ಕೊರತೆ ಸಮಿತಿ ಯೋಜನೆಯ ಅನುಷ್ಟಾನದಲ್ಲಿನ ಲೋಪಗಳನ್ನು ಸರಿಪಡಿಸಲಿದೆ. ಅದಕ್ಕೂ ಸರಿಪಡಿ ಸಲಾಗದ ಪರಿಸ್ಥಿತಿ ಉದ್ಭವಿಸಿದರೆ ಅಂಥ ಸಂದರ್ಭಗಳಲ್ಲಿ ಒಂಬುಡ್ಸ್ ಮೆನ್ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.ಪ್ರಸ್ತುತ ಒಂಬುಡ್ಸ್ ಮೆನ್ ಏಕ ವ್ಯಕ್ತಿಯನ್ನು ಒಳಗೊಂಡಿದ್ದು, ಮುಂದೆ ಸರಕಾರದ ನಿರ್ದೇಶನಗಳನ್ನು ಅನುಸರಿಸಿ ಇಬ್ಬರು ಉಪ ಒಂಬುಡ್ಸ್ ಮೆನ್ ಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಹಿರಿಯ, ಕಿರಿಯ ಅಧಿಕಾರಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದು, ಶೀನ ಶೆಟ್ಟಿಯವರಿಗೆ ಶುಭ ಹಾರೈಸಿದರು.