ಮಂಗಳೂರು ಆಗಸ್ಟ್ 18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 22ರಂದು ನಡೆದ ವೈಮಾನಿಕ ದುರಂತ ಸ್ಮೃತಿಪಟಲದಿಂದ ಮರೆಯಾಗದಿರುವ ಮುನ್ನವೇ ಜಿಲ್ಲಾಡಳಿತ ವಿಕೋಪ ನಿರ್ವಹಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ವಿಕೋಪ ನಿರ್ವಹಣೆ ಕಾರ್ಯಾಗಾರ ನಡೆಯಲಿ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಕ್ಯಾಟಲಿಸ್ಟ್ ಮ್ಯಾನೇಜ್ ಮೆಂಟ್ ಏಜೆನ್ಸಿ ಬೆಂಗಳೂರು, ಜಂಟಿಯಾಗಿ ಆಯೋಜಿಸಿದ್ದ 'ಪ್ರಾಕೃತಿಕ ವಿಕೋಪಗಳ ನೀತಿ,ಯೋಜನೆ ಮತ್ತು ವ್ಯವಸ್ಥಿತ ನಿರ್ವಹಣೆ' ಕುರಿತ ಕಾರ್ಯಾಗಾರ ವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆ ವಿಕೋಪ ನಿರ್ವಹಣೆಯಡಿ ಸಾಕಷ್ಟು ಅನುಭವಗಳನ್ನು ಪಡೆದಿದ್ದು ಅವಘಡಗಳ ಸಂದರ್ಭದಲ್ಲಿ ಪರಿಣಾಮಕಾರಿಯಾಗಿಯೇ ಕರ್ತವ್ಯ ನಿರ್ವಹಿಸಿದೆ. ಆದರೂ ಕಾರ್ಯಾಗಾರ ಗಳಿಂದ ಕರ್ತವ್ಯ ನಿರ್ವಹಣೆ ಇನ್ನಷ್ಟು ಸುಲಲಿತ ವಾಗಬೇಕು; ಲೋಪದೋಷಗಳನ್ನು ತಿದ್ದಿಕೊಳ್ಳಲು ಚರ್ಚಿಸಲು ಅನುಕೂಲವಾಗಬೇಕು. ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸಬೇಕು ಎಂದ ಅವರು, ಕಾರ್ಯಾ ಗಾರದಲ್ಲಿ ನೀಡಿದ ಪ್ರಶ್ನಾವಳಿ ಮಾದರಿ ಸಮಾಧಾನ ಕರವಾಗಿಲ್ಲ ಎಂದರು. ಜಿಲ್ಲೆಯಲ್ಲಿ ನೆರೆಹಾವಳಿ, ಭೂಕುಸಿತ ಮಳೆಗಾಲದ ಸಂಭವಗಳಾಗಿವೆ. ಆದರೆ ಹಲವು ಕೈಗಾರಿಕೆಗಳಿಗೆ ತವರೂರಾಗಿರುವ ಜಿಲ್ಲೆ ನಮ್ಮದಾಗಿದ್ದು, ರೈಲ್ವೇ, ವಿಮಾನ, ಸಮುದ್ರ ಮಾರ್ಗವನ್ನು ಹೊಂದಿದೆ. ಭಯೋತ್ಪಾದನಾ ಚಟುವಟಿಕೆ ನಡೆದರೆ ಈ ಸಂದರ್ಭದಲ್ಲಿ ಸ್ಪಂದಿಸುವ ಬಗ್ಗೆಯೂ ಅಗತ್ಯ ಪೂರ್ವ ತಯಾರಿ ಅಗತ್ಯವಿದೆ. ವಿಕೋಪಗಳ ಸಂದರ್ಭದಲ್ಲಿ ಜಿಲ್ಲಾಡಳಿತ ಸಜ್ಜಾಗಿರುವ ಬಗ್ಗೆ ಸಿದ್ಧತೆಯ ಬಗ್ಗೆ ಇಂತಹ ಕಾರ್ಯಾಗಾರಗಳು ಪೂರಕ ಬೆಂಬಲ ನೀಡುವಂತಿರಬೇಕು ಎಂದರು.
ಕಾರ್ಯಾ ಗಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಶ್ರೀ ಎನ್ ರಾಜಶೇಖರ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ದ.ಕ ಜಿಲ್ಲಾ ಮುಖ್ಯ ಯೋಜನಾ ಧಿಕಾರಿ ತಾಕತ್ ರಾವ್, ಲೋಕೋ ಪಯೋಗಿ ಇಲಾಖೆ ಗೋಪಾಲಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಹಲಗಪ್ಪ, ಎಎಸ್ ಪಿ ದ.ಕ ಮತ್ತು ಉಡುಪಿ, ಗೃಹ ರಕ್ಷಕ ದಳದ ಕಮಾಂಡೆಂಟ್ ನಿದರ್ಶ ಹೆಗಡೆ, ಬಿ ಎ ಎಸ್ ಎಫ್, ಎಚ್ ಪಿ ಸಿ ಎಲ್, ಕೆ ಐ ಒ ಸಿ ಎಲ್, ಎಂ ಸಿ ಎಫ್, ಎಂ ಆರ್ ಪಿ ಎಲ್, ಬಿ ಎಸ್ ಎನ್ ಎಲ್, ಭಾರತ್ ಪೆಟ್ರೋಲಿಯಂ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಏಜೆನ್ಸಿಯಿಂದ ಡಾ. ಜೋಷಿ ತಂಡ ಪಾಲ್ಗೊಂಡಿತ್ತು.