ಇಂದು ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 'ಜಿಲ್ಲಾ ಯುವಜನ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡುತ್ತಿದ್ದರು.
ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ವೆನ್ ಲಾಕ್ ಹಿಂದಿರುವ ಕೊಳಗೇರಿಯಲ್ಲಿ ತಾನು ಕಲಿತದ್ದನ್ನು ಮತ್ತು ಅಲ್ಲಿಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಕಲಿಸುತ್ತಿದ್ದದ್ದನ್ನು ಜ್ಞಾಪಿಸಿಕೊಂಡ ಉಪಸಭಾಪತಿಗಳು, ಬಳಿಕ ಅಲ್ಲಿ ಆದ ಬದಲಾವಣೆಗಳು, ಪ್ರೀತಿ ಮತ್ತು ಜ್ಞಾನ ಹಂಚುವಿಕೆಯಿಂದ ದೊರೆಯುವ ಸಂತೋಷವನ್ನು ವಿವರಿಸಿದರು.
ಇಂದು ಯುವ ನೀತಿ ರೂಪಿಸಲು ತಮ್ಮ ಸರ್ಕಾರ ಪಡುತ್ತಿರುವ ಯತ್ನದ ಬಗ್ಗೆ ಬೆಳಕು ಚೆಲ್ಲಿದ ಅವರು, ತಮ್ಮ ಅಮೆರಿಕ ಪ್ರವಾಸ ವೇಳೆ ಅಲ್ಲಿನ ಜನರು ತಮ್ಮ ಜೀವನದಲ್ಲಿ ಕಡ್ಡಾಯವಾಗಿ ಮಾಡುತ್ತಿರುವ ಸಾಮಾಜಿಕ ಸೇವೆಯಂತೆ ಇಲ್ಲೂ ಸಾಮಾಜಿಕ ಸೇವೆಗೆ ಅಂಕಗಳು ನೀಡುವಂತಾಗಬೇಕು ಎಂದರು. ಸೇವೆಗೂ ಅಂಕ ನೀಡುವಂತಾದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಸೇವೆಯ ಬಗ್ಗೆ ಜ್ಞಾನ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ; ಇದರಿಂದ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದರು. ಅಮೇರಿಕಾದ ಶಿಕ್ಷಣ ನೀತಿಯಂತೆ ನಮ್ಮಲ್ಲೂ ಸಮಾಜ ಸೇವೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಬೇಕು. ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನೆಗಳ ನೇರ ಲಾಭ ಜನರಿಗಾಗಬೇಕು. ಆಗ ಪ್ರತಿಯೊಬ್ಬ ನಾಗರೀಕರು ಸಾಮಾಜಿಕ ಹೊಣೆ ಅರಿಯಲು ಸಾಧ್ಯ ಎಂದರು.
ನಮ್ಮ ಮಾಜಿ ರಾಷ್ಟ್ರಪತಿಗಳಾದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿದ ಅವರು, ಎಲ್ಲ ಜ್ಞಾನವು ಆಧ್ಯಾತ್ಮ ಜ್ಞಾನದಡಿ ಬೆಳೆಯುವುದರಿಂದ ಯುವಕರಲ್ಲಿ ಆತ್ಮಹತ್ಯೆಯಂತಹ ಪ್ರವೃತ್ತಿಗಳು ಕಡಿಮೆಯಾಗಲಿವೆ ಎಂದರು.
ಉತ್ತಮ ಕಾರ್ಯಾಗಾರಗಳು, ಸಾಧಕರ ಜೀವನ ಚರಿತ್ರೆಯಿಂದ ಬದುಕುವ ಕಲೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ, ತಾನು ಪ್ರತೀ ಸಾರಿ ರಕ್ತದಾನ ಮಾಡುವಾಗಲೂ ದೊರೆಯುವ ಆತ್ಮತೃಪ್ತಿ ವರ್ಣಿಸಲಸಾಧ್ಯ ಎಂದರು. ನಮ್ಮ ಸಮಾಜಕ್ಕೆ ಇಂದು ಬರೀ ಬುದ್ಧಿವಂತ ಮಕ್ಕಳು ಮಾತ್ರ ಬೇಕೆಂಬ ಹಂಬಲ; ಆದರೆ ನಮಗಿಂದು ಸಮಚಿತ್ತ ಹೊಂದಿದ ಉತ್ತಮ ಮಕ್ಕಳ ಅಗತ್ಯವಿದೆ. ವೈಯಕ್ತಿಕ ಅಭಿವೃದ್ಧಿಗಿಂತ ಸಮುದಾಯ ಅಭಿವೃದ್ಧಿಯ ಹಂಬಲ ನಮ್ಮದಾಗಬೇಕಿದೆ ಎಂದರು. ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಮಾದರಿ ಯುವಶಕ್ತಿ ಎಂದ ಅವರು, ನಮ್ಮ ಯುವಶಕ್ತಿಗೆ ಅವರು ಮಾದರಿಯಾಗಲಿ ಎಂದರು.
ಸರ್ಕಾರ ಯುವನೀತಿ ಹೊಂದಲು 25 ಕೋಟಿ ರೂ.ಗಳನ್ನು ಮೀಸಲಿಟಿದ್ದು, ಈಗಾಗಲೇ ಈ ಸಂಬಂಧ 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯುವ ಜನಾಂಗಕ್ಕೆ ಸಂಬಂಧಿಸಿ ಸಮಗ್ರ ನೀತಿ ರಚನೆ ಇಂದಿನ ಅಗತ್ಯವಾಗಿದ್ದು, ಇದಕ್ಕೆ ಅಂತಿಮ ರೂಪು ರೇಷೆ ನೀಡಲು ಸರ್ಕಾರ ಸಜ್ಜಾಗಿದೆ ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಗಣನಾಥ ಎಕ್ಕಾರ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ ಪಾಶ್ರ್ವನಾಥ್, ದ.ಕ. ಜಿಲ್ಲಾ ಯುವಜನ ಒಕ್ಕೂಟದ ಹರೀಶ್ ಬೈಕಂಪಾಡಿ ಅತಿಥಿಗಳಾಗಿದ್ದರು. ಭಾರತೀಯ ಭೂವೈಜ್ಞಾನಿಕ ಸವೇಕ್ಷಣಾದ ಅಬ್ದುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಘಟಕದ ಸಂಯೋಜಕರು ಹಾಗೂ ಉಪನ್ಯಾಸಕ ದಯಾನಂದ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರೇಯಾ ಸುವರ್ಣ ಪ್ರಾರ್ಥಿಸಿದರು.