ಇಂದು ಜಿಲ್ಲಾ ಪಂಚಾಯತ್ ನ ಮಿನಿ ಹಾಲ್ ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ದಕ್ಷಿಣ ಕನ್ನಡದ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ಅನ್ನಾರು ಕಾಲೊನಿಗೆ ಸೇತುವೆ ನಿರ್ಮಾಣಕ್ಕೆ 20 ಲಕ್ಷ ರೂ., ನಾರಾವಿ, ಕುತ್ಲೂರು, ಅಳಪ ಫಾರೆಸ್ಟ್ ಗೇಟ್ , ಕುರಿಯಾಡಿ, ನೆಲ್ಲಿಕಾರು ರಸ್ತೆ 20 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ತಾಂತ್ರಿಕ ಪರಿಶೀಲನೆಗೆ ಅಧೀಕ್ಷಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ ಇವರಿಗೆ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಜಿಲ್ಲಾಧಿಕಾರಿಗಳು ನೀಡಿದ 41 ಲಕ್ಷ ರೂ.ಗಳಲ್ಲಿ 8 ಕಾಮಗಾರಿಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಅನುಮೋದನೆ ನೀಡಿರುತ್ತಾರೆ ಎಂದರು.
ಐಟಿಡಿಪಿ ಅಧಿಕಾರಿ ಸಾಬಿರ್ ಅಹಮದ್ ಮುಲ್ಲಾ ಅವರು ಮುಂದಿನ 15 ದಿನಗಳೊಳಗೆ ಸುಲ್ಕೇರಿ ಮೊಗ್ರು ಪ್ರದೇಶಗಳಿಗೆ ಒಂದು ಲಕ್ಷ ರೂ. ವೆಚ್ಚದಲ್ಲಿ ಐದು ಯುನಿಟ್ ನ ಸೋಲಾರ್ ಲೈಟ್ ಅಳವಡಿಸುವ ಕಾಮಗಾರಿ ಮುಗಿಯಲಿದೆ ಎಂದರು.
ಇದಲ್ಲದೆ 25 ಫಲಾನುಭವಿಗಳಿಗೆ ಜೆಸಿಬಿ ತರಬೇತಿ ನೀಡಲು ಹಾಗೂ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು (ಟ್ರೈಬಲ್ ಆಕ್ಟ್ ) ಗಿರಿಜನ ಅಭಿವೃದ್ಧಿ ಯೋಜನೆಯಡಿ 213 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇಲ್ಲಿ ವಾಸಿಸುತ್ತಿರುವ ಮಲೆಕುಡಿಯರ ಸಮಗ್ರ ಸಮೀಕ್ಷೆ ನಡಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವಿಸಲಾಯಿತು. ಐಟಿಡಿಪಿ ಇಲಾಖೆಯಿಂದ ಇಲಿನ್ಲ 6ರಿಂದ 10ವರ್ಷದೊಳಗಿನ ಮಕ್ಕಳಿಗಾಗಿ ಒಂದು ಆಶ್ರಮ ಶಾಲೆ ಹಾಗೂ ಇನ್ನೊಂದು ಬಾಲಿಕೆಯರ ವಿದ್ಯಾರ್ಥಿ ನಿಲಯವಿದ್ದು, ನಾರಾವಿಯ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳು ಮತ್ತು ಬಾಲಿಕೆಯರ ವಿದ್ಯಾರ್ಥಿ ನಿಲಯದಲ್ಲಿ 50 ಮಕ್ಕಳಿದ್ದಾರೆ. ಈ ಮಕ್ಕಳಿಗೆ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ವಿವರಣೆಯನ್ನು ಸಿಇಒ ಪಡೆದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮಶಕ್ತಿ ಯೋಜನೆಯಡಿ 24 ಫಲಾನುಭವಿಗಳಿಗೆ 4.80 ಲಕ್ಷರೂ. ಸಾಲಸೌಲಭ್ಯ ನೀಡಲಾಗಿದೆ. ನಾರಾವಿ,ಮಿತ್ತ ಬಾಗಿಲು, ಲಾಯಿಲಾ, ಸವಣಾಲಿನಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಕಿರು ಸಾಲ ಯೋಜನೆಯಡಿ 25 ಜನವರಿಗೆ ವರಿಗೆ 2,50,000 ರೂ.ಗಳ ಸಾಲಸೌಲಭ್ಯ ನೀಡಲಾಗುವುದು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನಾರಾವಿ, ಮಿತ್ತಬಾಗಿಲು ಪ್ರದೇಶಗಳಿಂದ ಒಟ್ಟು 14 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧಿಕಾರಿ ಸೋಮಪ್ಪ ಅವರು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ ಈ ಪ್ರದೇಶಗಳಲ್ಲಿ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಇಒ ಅವರು ಮಾಹಿತಿ ಕೋರಿದರಲ್ಲದೆ, ಇಲ್ಲಿರುವ ಸನಿವಾಸ ಶಾಲೆಯಲ್ಲಿ 66 ಮಕ್ಕಳಿದ್ದು, ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿರಿಸಿಕೊಂಡು ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಸಲಹೆ ಮಾಡಿದರು.
12-13ನೇ ಸಾಲಿನಲ್ಲಿ ಬೆಳ್ತಂಗಡಿಯ ದುರ್ಗಮಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಇಲಾಖೆಗಳು ರೂಪಿಸಿದ ಯೋಜನೆಯನ್ನು ಪರಿಶೀಲಿಸಿದ ಸಿಇಒ ಅವರು ಸಮಯಮಿತಿಯೊಳಗೆ ಯೋಜನೆ ಜಾರಿಗೆ ತರಬೇಕೆಂದರು.
ಅರಣ್ಯ ಇಲಾಖೆ ವನ್ಯ ಜೀವಿ ವಿಭಾಗದ ಅಧಿಕಾರಿಗಳಾದ ಪ್ರಕಾಶ್ ನೇತಾಲ್ಕರ್ ಅವರು,ಅರಣ್ಯ ಪ್ರದೇಶಗಳೊಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ, ಪರಿಸರ ಅಭಿವೃದ್ಧಿ ಸಮಿತಿ(ಇಕೋ ಡೆವಲಪ್ ಮೆಂಟ್ ಕಮಿಟಿ)ಯ ಮುಖಾಂತರ ಮುಂಚಿತವಾಗಿ ಮಾಹಿತಿ ನೀಡಿದರೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎಂದರು. ಯಾವುದೇ ಯೋಜನೆಗಳ ಬಗ್ಗೆಯೂ ಮುಂಚಿತವಾಗಿ ಮಾಹಿತಿ ನೀಡುವುದರಿಂದ ಅನಗತ್ಯ ತೊಂದರೆಗಳನ್ನು ನಿವಾರಿಸಲು ಸಾಧ್ಯ ಎಂದರು.
ಸಭೆಯಲ್ಲಿ ಉಪಕಾರ್ಯದರ್ಶಿ ಶಿವರಾಮೇ ಗೌಡ ಅವರು ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.