
ಸತತ ಸುರಿಯು ತ್ತಿರುವ ಮಳೆಯಿಂದ ಮಂಗಳೂರು ನಗರ ಸೇರಿದಂತೆ ಹಲವು ಕಡೆ ಕೃತಕ ನೆರೆ ಭೀತಿ ಸೃಷ್ಟಿ ಯಾಗಿದೆ. ಇದು ವರೆಗೆ 59 ಕಡೆಗಳಲ್ಲಿ ಮಳೆ ಹಾನಿ ಹಾಗೂ ನೀರು ನುಗ್ಗಿದ ಬಗ್ಗೆ ಸಾರ್ವಜನಿ ಕರಿಂದ ದೂರು ಬಂದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದರು. ನಗರದ ಕೋಡಿಕಲ್, ಕೊಟ್ಟಾರ ಚೌಕಿ, ಭಗವತಿ ನಗರ, ಕಟ್ಟೆಪುಣಿ, ಬಂದರು ಒಣಮೀನು ಗೋದಾಮು ಇರುವ ಕಡೆ ನೀರು ನುಗ್ಗಿ ಹಾನಿಯಾಗಿದೆ. ನದಿ, ಸಮುದ್ರ ಸೇರುವ ಅಳಿವೆ ಬಾಗಿಲಿನ ಬಳಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಕೋಡಿಕಲ್ ಭಗವತಿ ನಗರದ ಬಳಿ 4ರಿಂದ 5 ಅಡಿ ನೀರು ನಿಂತಿದೆ. ಇಲ್ಲಿ ಮನಪಾ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಹಲವು ಕಡೆ ಚರಂಡಿ ಒತ್ತುವರಿಯಾಗಿರುವುದು ಕೃತಕ ನೆರೆಗೆ ಕಾರಣವಾಗಿದೆ.ಒತ್ತುವರಿ ತೆರವಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ. ಜಪ್ಪಿನಮೊಗರು, ಕೂಳೂರು, ಕಣ್ಣೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕೃತಕ ನೆರೆ ಉಂಟಾಗಿದೆ ಎಂದು ಮನಪಾ ಆಯುಕ್ತರು ಸಭೆಗೆ ವಿವರಿಸಿದರು.
ಮಂಗಳೂರಿನಲ್ಲಿ 1000 ಮಿ.ಮೀ. ಹೆಚ್ಚುವರಿ ಮಳೆ :
ಮಂಗಳೂರು ತಾಲೂಕಿನಲ್ಲಿ ಕಳೆದ ಬಾರಿಗೆ ಹೋಲಿಸಿ ದಾಗ ಈ ಬಾರಿ ಒಂದು ಸಾವಿರ ಮಿಲಿ ಮೀಟರ್ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯ ಉಳಿದ ಕಡೆಗಿಂತ ಮಂಗಳೂರು ತಾಲೂಕಿನಲ್ಲಿ ಈ ತಿಂಗಳು ಹೆಚ್ಚು ಮಳೆ ಸುರಿದಿದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ 24 ಗಂಟೆಯೂ ಲಭ್ಯ ಹೆಲ್ಪ್ ಲೈನ್ ಕಾರ್ಯನಿರ್ವಹಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
