
ಅಂದು ಸಂಜೆ 5 ಗಂಟೆಗೆ ಸಮಾರಂಭವನ್ನು ಜೀವಿಶಾಸ್ತ್ರ,ಪರಿಸರ, ಬಂದರು ಮತ್ತು ಮುಜರಾಯಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಉದ್ಘಾಟಿಸುವರು. ಹಿರಿಯ ವಿದ್ವಾಂಸ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಭಾಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಪರಾಹ್ನ 2.30ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಮತ್ತು ಕೆನರಾ ಹೈಸ್ಕೂಲ್ ಉರ್ವಾ ಮಕ್ಕಳಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪಾಂಚಜನ್ಯ ಹಾಗೂ ಸಂಜೆ 6.30ರಿಂದ ಕೃಷ್ಣ ಯಾಜಿ ಬಳಕ ಶ್ರೀ ಸಾಲಿಗ್ರಾಮ ಮೇಳ ಇವರಿಂದ ಬಡಗುತಿಟ್ಟು ಯಕ್ಷಗಾನ ಬಯಲಾಟ ಜಾಂಬವತಿ ಕಲ್ಯಾಣ ಜರುಗಲಿದೆ.
ಸಾಧಕ ಡಾ.ಅಮೃತರಿಗೆ 'ಕಾರಂತ ಪುರಸ್ಕಾರ'

ಎಪ್ಪತ್ತರ ಹರೆಯದ ಪ್ರೊ. ಅಮೃತ ಸೋಮೇಶ್ವ ರರದ್ದು ವೈವಿಧ್ಯ, ವೈಶಿಷ್ಟ್ಯ ಗುಣ ಮಟ್ಟಗಳಲ್ಲಿ ಬೆರಗುಗೊಳಿಸುವ ಸಾಂಸ್ಕೃತಿಕ ಕಾಯಕ, ಜಾನಪದ ಸಂಗ್ರಹ ಸಂಶೋಧನೆ, ಯಕ್ಷಗಾನ, ಕತೆಕಾದಂಬರಿ, ವಿಮರ್ಶೆ, ಕಾವ್ಯ,ಅನುವಾದ,ನಗೆಬರಹ, ಪ್ರಬಂಧ, ನಾಟಕ, ಗಾದೆ, ಕೋಶರಚನೆ,ಗೀತರಚನೆ, ಬಹುಭಾಷಾ ಸಾಹಿತ್ಯ ವ್ಯವಸಾಯ,ಅಧ್ಯಾಪನ, ಸಂಘಟನೆ, ಮಾರ್ಗದರ್ಶನ, ಉಪನ್ಯಾಸ, ಚಿಂತನ, ಗ್ರಂಥ ಸಂಪಾದನ ಮೊದಲಾದ ಹತ್ತಾರು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪ್ರವರ್ತಿಸಿ ಐದು ದಶಕಗಳಿಗೂ ಮಿಕ್ಕಿದ ಸಾಧನೆಗೈದವರು. ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ವೈಶಿಷ್ಟ್ಯಗಳ ಸಾಧಕ ಪ್ರತಿನಿಧಿಯಾಗಿದ್ದಾರೆ. ಆಸಕ್ತಿ, ಸಾಧನೆ, ವಿಚಾರ ಕಾಯಕಗಳಲ್ಲಿ ಡಾ. ಕಾರಂತರ ಜತೆ ಅನೇಕ ಸಾಮ್ಯಗಳನ್ನು ಹೊಂದಿದ್ದು, ಒಂದು ರೀತಿಯಲ್ಲಿ ಕಾರಂತ ತನದ ಮುಂದುವರಿಕೆ ಯಾಗಿದ್ದಾರೆ. ಜತೆಗೆ ತಮ್ಮ ಸೌಮ್ಯ, ಸರಳ, ಆದರ್ಶ ವ್ಯಕ್ತಿತ್ವದಿಂದಲೂ ನಾಡಿನ ಗೌರವಕ್ಕೆ ಪಾತ್ರರಾದವರು. ತುಳು-ಕನ್ನಡಗಳಲ್ಲಿ ಅಮೃತರು ರಚಿಸಿದ 85 ಕೃತಿಗಳಲ್ಲಿ ಸಾಹಿತ್ಯದ ಹೆಚ್ಚು ಕಡಿಮೆ ಸಕಲ ಪ್ರಕಾರಗಳ ರಚನೆಗಳು ಸೇರಿವೆ. ಯಕ್ಷಗಾನ ಕೃತಿ ಸಂಪುಟ, ಪಾಡ್ದನ ಸಂಪುಟ, ತುಳು ಬದುಕು, ನಾಟಕ ಸಂಪುಟ, ತೀರದ ತೆರೆ(ಕಾದಂಬರಿ), ಕಲೆವಾಲ (ಮಹಾಕಾವ್ಯಾನುವಾದ), ಯಕ್ಷಾಂದೋಳ (ಕಲಾ ವಿಮರ್ಶೆ) ಹೃದಯಾವರ್ತಗಳು, ಭಗವತೀ ಆರಾಧನೆ, ಅಪಾರ್ಥಿನೀ ಕೋಳ, ಮೋಯ ಮಲೆಯಾಳ, ಶಬ್ದಕೋಶ ಇವು ಅಮೃತರ ಕೆಲವು ಮುಖ್ಯ ಕೃತಿಗಳು. ಮಂಗಳೂರು ವಿವಿ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಕು.ಶಿ.ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ ಸಹಿತ ಹಲವು ಗೌರವಗಳನ್ನು ಪುಸ್ತಕ ಪುರಸ್ಕಾರಗಳನ್ನು ಸಮ್ಮೇಳನ ಅಧ್ಯಕ್ಷತೆಗಳನ್ನು ಪಡೆದಿರುವ ಅಮೃತರದ್ದು ದಣಿವಿರದ ದುಡಿಮೆ, ಆಶ್ಚರ್ಯಕರ ಕ್ರಿಯಾಶೀಲನೆ, ಸಮನ್ವಯ ಮಾರ್ಗದ ಸಂಸ್ಕೃತಿ ನಿಷ್ಠ ನಿಲುವಿನ ದೃಢವೈಚಾರಿಕತೆಯ ಅಮೃತರು ಪಂಥಗುಂಪುಗಳಿಂದ ದೂರವಾಗಿದ್ದು ತನ್ನದಾದ ಮೆಲುದನಿಯ ಗಟ್ಟಿತನ ಹೊಂದಿದವರು, ಬಹುವಿಷಯ ಆಸಕ್ತರು, ಸದಾ ಕುತೂಹಲಿ,ಸದಾ ಹಸನ್ಮುಖಿ, ಅಬ್ಬರವಿಲ್ಲದ ಶಾಂತ ಪ್ರಗಲ್ಭ ವ್ಯಕ್ತಿತ್ವವುಳ್ಳವರು.