Friday, November 20, 2009

ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ:ಮೇಯರ್ ಶಂಕರ್ ಭಟ್

ಮಂಗಳೂರು,ನ.20:ನಗರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದು,ನಮ್ಮ ಪ್ರದೇಶ ವ್ಯಾಪ್ತಿಯ ಗ್ರಂಥಾಲಯಗಳನ್ನು ಸುಸ್ಜಜ್ಜಿತವಾಗಿಡಲು ಮತ್ತು ಮೊಬೈಲ್ ಗ್ರಂಥಾಲಯಗಳ ಅಭಿವೃದ್ಧಿಗೆ ಸರ್ವ ಆರ್ಥಿಕ ನೆರವನ್ನು ನೀಡುವುದಾಗಿ ಮಹಾನಗರಪಾಲಿಕೆ ಮೇಯರ್ ಶಂಕರ್ ಭಟ್ ಹೇಳಿದರು.ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು,ಓದುವ ಹವ್ಯಾಸದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಇಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಉರ್ವಸ್ಟೋರ್ ಬಳಿ ಇರುವ ಸಣ್ಣ ಗ್ರಂಥಾಲಯವನ್ನು ಸುಸಜ್ಜಿತ ಮಾರ್ಕೆಟ್ ನಿರ್ಮಾಣದ ವೇಳೆ ಮೂಡಾದಲ್ಲಿರುವ ಸಣ್ಣ ಪ್ರದೇಶವನ್ನು ಎರಡೂವರೆ ಲಕ್ಷ ರೂ.ಗಳಲ್ಲಿ ನವೀಕರಣಗೊಳಿಸಿ ಸ್ಥಳಾಂತರಿಸಲಾಗುತ್ತದೆ.ಕೇಂದ್ರ ಗ್ರಂಥಾಲಯಕ್ಕೆ ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು ಇದಕ್ಕಾಗಿ ನೀಲಾ ನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. ವೈಜ್ಞಾನಿಕ ಯುಗದಲ್ಲಿ ನಾವು ಎಷ್ಟೇ ಮುಂದುವರಿದರೂ,ಪುಸ್ತಕವನ್ನು ಹಾಗೇ ಓದುವ ದಾಹ ಯುವ ಸಮುದಾಯಕ್ಕಿದೆ.ಆನ್ ಲೈನ್ ಓದಿಗಿಂತ ಪುಸ್ತಕವಾಗಿ ಓದುವ ರೀತಿಯಲ್ಲಿ ವ್ಯತ್ಯಾಸವಿದೆ ಎಂದ ಅವರು ನಗರದ ಗ್ರಂಥಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು, ಸಾರ್ವಜನಿಕ ಗ್ರಂಥಾಲಯಗಳಿಂದ ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಸಹಕಾರಿಯಾಗಿದ್ದು, ಅವರ ಓದುವ ಆಸೆಯನ್ನು ಇಂತಹ ಗ್ರಂಥಾಲಯಗಳು ಪೂರೈಸುತ್ತಿವೆ.ಗ್ರಂಥಾಲಯಗಳು ಮಾಹಿತಿ ಕೋಶಗಳು ಇವುಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯ ನೆರವು ನೀಡುವ ಭರವಸೆಯನ್ನು ಅವರು ನೀಡಿದರು.
ಮಹಾ ನಗರ ಪಾಲಿಕೆ ಸದಸ್ಯ ರಂಗನಾಥ್ ಕಿಣಿ, ಮಂಗಳೂರು ವಿವಿಯ ಗ್ರಂಥಪಾಲಕ ಡಾ. ಎಂ.ಕೆ.ಭಂಡಿ, ಬದ್ರಿಯಾ ಕಾಲೇಜಿನ ಪ್ರಾಚಾರ್ಯ ಡಾ.ಎನ್. ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿದ್ದರು.ಮನಾಪ ಸದಸ್ಯ ಮೋಹನ್ ಕುಮಾರ್ ನಿವೃತ್ತ ಗ್ರಂಥಪಾಲಕ ಕೆ.ವಾಮನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಗ್ರಂಥಾಲಯಧಿಕಾರಿ ವೆಂಕಟೇಶ್ ಸ್ವಾಗತಿಸಿದರು. ಉಪನಿರ್ದೇಶಕ ದಿವಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಮತ ಕಾರ್ಯಕ್ರಮ ನಿರೂಪಿಸಿದರು.