Wednesday, November 25, 2009

ಮಂಗಳೂರು ಮಹಾನಗರಪಾಲಿಕೆ ನರ್ಮ ವ್ಯಾಪ್ತಿಗೆ: ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್

ಮಂಗಳೂರು,ನ.25:ನಗರಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಡಿಸೆಂಬರ್ 3ರಂದು ದೆಹಲಿಯಲ್ಲಿ ನಡೆಯಲಿರುವ ನರ್ಮ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಜೈರಾಮ್ ರಮೇಶ್ ಅವರ ಜೊತೆ ಚರ್ಚಿಸಿ ಯೋಜನೆ ವ್ಯಾಪ್ತಿಯನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಸಂದರ್ಭದಲ್ಲಿ,ಮಂಗಳೂರನ್ನು ಯೋಜನೆಯಡಿ ತರಲು ಯತ್ನಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹೇಳಿದರು.

ನಗರದ ಅಭಿವೃದ್ಧಿ ಕಾಮ ಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,ಮಂಗಳೂರನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ನರ್ಮ ಯೋಜನೆ ವ್ಯಾಪ್ತಿಗೆ ನಗರವನ್ನು ಸೇರಿಸಲು ಕೇಂದ್ರ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರಲ್ಲದೆ, ನಗರಾಭಿವೃದ್ಧಿ ನೀತಿ,ವೃಂದ ಮತ್ತು ನೇಮಕಾತಿ ಕಾನೂನು,ದಿನಗೂಲಿ ನೌಕರರ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು.
ನಗರದ ಬಹುಮಹಡಿ ಕಟ್ಟಡಗಳಲ್ಲಿ ಕಳೆದ ಒಂದು ವರ್ಷದಿಂದ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಉತ್ತರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ಎಸ್ ಎಸ್ ಎಲ್ ಸಿ ಪರೀಕ್ಷೆಗೆ 16 ವರ್ಷ ಕಡ್ಡಾಯದ ಬಗ್ಗೆ ಯಾವುದೇ ಗೊಂದಲಗಳು ಬೇಡ;ಈಗ ಎಲ್ಲರಿಗೂ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು;ಸುಮಾರು 17,000 ಮಕ್ಕಳಿದ್ದು ಇವರಿಗೆ ಪರೀಕ್ಷೆ ಬರೆಯಲು ತೊಂದರೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಆದರೆ ಈ ವರ್ಷದಿಂದ ತರಗತಿಗೆ ಸೇರ್ಪಡೆ ಸಂದರ್ಭದಲ್ಲಿ ಮಕ್ಕಳಿಗೆ 5ವರ್ಷ ಹತ್ತು ತಿಂಗಳಾಗಿರಬೇಕು;ಈ ಬಗ್ಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೇಮಾರ್, ಶಾಸಕ ಯೋಗೀಶ್ ಭಟ್, ಹಿರಿಯ ಸಲಹೆಗಾರರಾದ ಡಾ. ಎ.ರವೀಂದ್ರ,ಮೇಯರ್ ಶಂಕರ್ ಭಟ್,ಡಿಸಿ ಪೊನ್ನುರಾಜ್,ಮನಾಪ ಕಮಿಷನರ್ ಡಾ. ವಿಜಯಪ್ರಕಾಶ್ ಉಪಸ್ಥಿತರಿದ್ದರು.