ಮಂಗಳೂರು,ನ.16: ಸಮಾಜವನ್ನು ತಿದ್ದುವ ಕಾರ್ಯ ಮಾಧ್ಯಮಗಳಿಂದ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೇಮಾರ್ ಹೇಳಿದ್ದಾರೆ.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ವಾರ್ತಾ ಇಲಾಖೆಯು ಸೋಮವಾರ ಆಯೋಜಿಸಿದ್ದ "ಸಾಮಾಜಿಕ ಸೌಹಾರ್ದತೆಯಲ್ಲಿ ಮಾಧ್ಯಮಗಳ ಪಾತ್ರ" ವಿಚಾರ ಸಂಕಿರಣವನ್ನು ಇಲಾಖೆಯ ಪತ್ರಿಕಾ ಕೊಠಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು.ಮಾಹಿತಿಯ ಮಹಾಪೂರವನ್ನೇ ಹರಿಸುವ ಮಾಧ್ಯಮಗಳು ಸುದ್ದಿ ನೀಡುವ ಪೈಪೋಟಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮಾತನಾಡಿ,ಸಾಮಾಜಿಕ ಸೌಹಾರ್ದತೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು.ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಧನಾತ್ಮಕ ವಿಷಯಗಳ ಕಡೆಗೆ ಗಮನ ಹರಿಸಬೇಕಾಗಿರುವುದು ಅಗತ್ಯ ಎಂದರು.
ಮಂಗಳೂರು ಮೇಯರ್ ಶಂಕರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಪತ್ರಿಕೆಗಳು,ವಿದ್ಯುನ್ಮಾನ ಮಾಧ್ಯಮಗಳು ವರದಿಗಾರಿಕೆಯಲ್ಲಿ ವಸ್ತು ನಿಷ್ಠತೆಯ ಕಡೆಗೆ ಗಮನಹರಿಸಲಿ.ವಿಷಯದ ಬಗ್ಗೆ ಮಾಧ್ಯಮಗಳೇ ತೀರ್ಪು ಕೊಡುವುದು ಸಲ್ಲದು. ಮಾತು ಮತ್ತು ಕೃತಿಯಲ್ಲಿ ಸಾಮ್ಯತೆ ಇರಲಿ ಎಂದು ನುಡಿದರು.
ಮಂಗಳೂರು ಶಾಸಕ ಯೋಗೀಶ್ ಭಟ್ ,ಆರೋಗ್ಯವಂತ ಸಮಾಜದ ಅಭಿವೃದ್ದಿಯ ಬಗ್ಗೆ ಮಾಧ್ಯಮಗಳು ಸಮಗ್ರವಾಗಿ,ಚಿಂತನೆ ನಡೆಸಲಿ ಎಂದು ಹೇಳಿದರು.
ಪಡೀಲ್ ಅಮೃತ ಕಾಲೇಜಿನ ಆಡಳಿತಾಧಿಕಾರಿ ತಾರನಾಥ ಕಾಪಿಕಾಡ್ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ, ಮಾಧ್ಯಮಗಳು ಸುದ್ದಿ ನೀಡುವ ಧಾವಂತದಲ್ಲಿ ನೀತಿ ಸಂಹಿತೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಿದೆ.ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲೂ ಪತ್ರಕರ್ತರು ನೀತಿ ಸಂಹಿತೆಗಳನ್ನು ಪಾಲಿಸಿ ತಮ್ಮ ವೃತ್ತಿ ಘನತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ಸ್ವಾಗತಿಸಿದರು.ಫ್ರಾನ್ಸಿಸ್ ಲೂವಿಸ್ ವಂದಿಸಿದರು. ಪತ್ರಕರ್ತ ಗುರುವಪ್ಪ ಬಾಳೆಪುಣಿ ಕಾರ್ಯಕ್ರಮ ನಿರೂಪಿಸಿದರು.