ಮಂಗಳೂರು,ನ.20:ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಇಲಾಖೆಗಳ ನಡುವೆ ಸಹಕಾರ ಹಾಗೂ ಸಮನ್ವಯದ ಅಗತ್ಯವಿದೆ; ಇಲ್ಲದಿದ್ದರೆ ಪ್ರದೇಶ ಅಭಿವೃದ್ಧಿ ಕುಂಠಿತವಾಗಿ ಜನರು ತೊಂದರೆಗೊಳಪಡುತ್ತಾರೆ;ಹೀಗಾಗದಂತೆ ಸಮನ್ವಯ ಹಾಗೂ ಸಮಯಮಿತಿ ನಿಗದಿಪಡಿಸಿ ಯೋಜನೆಗಳನ್ನು ಸಂಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಅವರು ಹೇಳಿದರು.
ಇಂದು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 4 ತಿಂಗಳಿಂದ ಸಮುದ್ರದಲ್ಲಿ ಸಿಲುಕಿರುವ ಏಷಿಯನ್ ಫಾರೆಸ್ಟ್ ಶಿಪ್ ಅನ್ನು ಮೇಲೆತ್ತುವ ಪ್ರಗತಿಯಾಗಿಲ್ಲ.ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ 5 ದಿನಗಳೊಳಗೆ ಈ ಸಂಬಂಧ ಸಮೀಕ್ಷೆ ಮುಗಿಸಿ ವರದಿಯ ನಕಲನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಿದರು.ರಸ್ತೆ ಅಭಿವೃದ್ಧಿ ಮತ್ತು ಅರಣ್ಯ ಇಲಾಖೆ ಕಾರ್ಯ ವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರಲ್ಲದೆ, ಅದರಲ್ಲೂ ಮುಖ್ಯವಾಗಿ ಸುಳ್ಯಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮವನ್ನು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದಾಗ,ಸಮಸ್ಯೆ ಪರಿಹರಿಸುವ ಭರವಸೆಯನ್ನು ಡಿ ಎಫ್ ಒ ಅವರು ಸಭೆಗೆ ನೀಡಿದರು.ಕಾನೂನು ಪಾಲನೆಯ ಜೊತೆ ಜನಹಿತವನ್ನು ಗಮನದಲ್ಲಿರಿಸಿ ಇಲಾಖೆಗಳ ನಡುವೆ ಪರಸ್ಪರ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ನಿಗದಿತ ಗುರಿ ಹಾಗೂ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸಲಹೆ ಮಾಡಿದರು. ಜಿಲ್ಲೆಯ ಬಹುಮುಖ್ಯ ಸಮಸ್ಯೆಯಾದ ರಸ್ತೆಗಳ ದುರಸ್ತಿ ಬಗ್ಗೆ ನಡೆದ ಸುದೀರ್ಘ ಚರ್ಚೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಹೊಣೆಯನ್ನು ಸಂಪೂರ್ಣವಾಗಿ ನಿರ್ವಹಿಸದೆ ನುಣುಚಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾವು ನಮ್ಮ ಮುಖ್ಯ ಕಚೇರಿಯ ನಿಯಮಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ;ಆದರೆ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ನಮ್ಮೊಂದಿಗೆ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.ಎನ್ ಎಚ್ ಎ ಐ ಹೆದ್ದಾರಿ ನಿರ್ಮಿಸುವಾಗ ರೂಪಿಸಿರುವ ಯೋಜನೆಯ ಸಮರ್ಪಕವಾಗಿಲ್ಲದೆ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಅವರು ಪೂರ್ವಯೋಜಿತವಾಗಿ ಮಾರ್ಕಿಂಗ್ ಮಾಡದೆ ಇರುವುದರಿಂದ ಆಗಾಗ ಜಿಲ್ಲಾಡಳಿತ ಸ್ವಲ್ಪ ಸ್ವಲ್ಪವೇ ಭೂಸ್ವಾಧೀನ ಮಾಡಬೇಕಾದ ಅಗತ್ಯ ಒದಗಿಬಂತಲ್ಲದೆ,ಪ್ರಾಜೆಕ್ಟ್ ಡೈರಕ್ಞರ್ ಗಳಿಗೆ ಯೋಜನೆಯ ಸಮರ್ಪಕ ಚಿಂತನೇ ಇಲ್ಲ;ಜನರ ಪ್ರಶ್ನೆಗಳಿಗೀಗ ಜಿಲ್ಲಾಡಳಿತ ಉತ್ತರಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಯುಟಿಲಿಟಿ ಪ್ರದೇಶ(ಟೆಲಿಫೋನ್ ಲೈನ್,ನೀರು ಪೂರೈಕೆ ಕೊಳವೆ,ಮೆಸ್ಕಾಂ ಸ್ಥಳಾಂತರ)ವನ್ನು ಸರಿಯಾಗಿ ಗುರುತಿಸದೆ ಯೋಜನೆ ಅಸರ್ಮಪಕವಾಗಿದ್ದು,ತುಂಬೆ-ಬಂಟ್ವಾಳ, ಮಂಗಳೂರು-ಸುರತ್ಕಲ್ ನಡುವೆ ಬಹಳಷ್ಟು ಸಮಸ್ಯೆಗಳಾಗಿವೆ. ಈ ಸಂಬಂಧ ನವೆಂಬರ್ ಒಂದರಂದು ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಥೂರ್ ಅವರ ಜೊತೆಯೂ ಚರ್ಚಿಸಿರುವರು. ನಂತೂರು - ಬಿಕರ್ನಕಟ್ಟೆ,ಕೊಟ್ಟಾರ ಫ್ಲೈ ಓವರ್ ಕಾಮಗಾರಿಯ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕರ್ನಾಟಕ ಸ್ಟೇಟ್ ವೈಡ್ ನೆಟ್ ವರ್ಕ್ ಸೇವೆಯನ್ನು ಈ ತಿಂಗಳಾಂತ್ಯದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು,ರಾಷ್ಟ್ರದಲ್ಲೇ ಪ್ರಥಮವಾದ ಈ ಅತ್ಯಾಧುನಿಕ ಯೋಜನೆ ಸರ್ಕಾರಿ ಇಲಾಖೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ವಿವರಿಸಿದರು. ಉದ್ಯೋಗಖಾತ್ರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ.ಗಳ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಅವರು ನುಡಿದರು.ಮಂಗಳೂರು-1ಯೋಜನೆಯು ಡಿಸೆಂಬರ್ 15ರೊಳಗೆ ಮುಗಿಯಲಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಭರದಿಂದ ನಡೆಯುತ್ತಿದೆ ಎಂದು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅಡಿಷನಲ್ ಎಸ್ ಪಿ, ಅಡಿಷನಲ್ ಡಿಸಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.