ಮಂಗಳೂರು,ನ 28. ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ ಮತ್ತು 2008- 2009 ರ ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ಇಂದು ನಡೆಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ದೇಶದ ಆಸ್ತಿಯಾದ ಯುವಕರಿಂದ ಮಾತ್ರ ಸಧೃಡ ಭಾರತ ನಿರ್ಮಾಣ ಮಾಡಲು ಸಾಧ್ಯ.ರಾಷ್ಟ್ರ ಅಭಿವೃದ್ದಿಯೇ ಗುರಿಯಾಗಿರಿಸಿ ಯುವ ಜನತೆ ಮುಂದಡಿ ಇಡಬೇಕೆಂದು ಕರೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಂಗಳೂರು ಮೇಯರ್ ಎಂ. ಶಂಕರ್ ಭಟ್ ಅವರು ಮುಖ್ಯ ಅಥಿತಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. 2008-09 ರ ಯುವ ಪ್ರಶಸ್ತಿಯನ್ನು ಹಳೆಯಂಗಡಿ ಯುವತಿ ಮಂಡಲದ ಕುಮಾರಿ ವನಿತ ಮತ್ತು ಕಾರ್ಕಳ ಯುವಕ ಮಂಡಲದ ಯತೀಶ್ ಅವರಿಗೆ,ಹಾಗೂ ಅತ್ತ್ಯುತ್ತಮ ಯುವ ಮಂಡಲ ಪ್ರಶಸ್ತಿಯನ್ನು ಕನಕ ಮಜಲು ಯುವಕ ಮಂಡಲಕ್ಕೆ ಅತಿಥಿಗಳು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಮ್ ದೇವ್ ಶೆಣೈ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಯುವಜನ ಸಮನ್ವಯ ಅಧಿಕಾರಿ ಅನಂತಪ್ಪ ಬಿ., ರಾ.ಸೇ. ಯೋಜನಾಧಿಕಾರಿ ಡಾ. ಶ್ರೀಧರ ಹೆಗ್ಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು,ನ.25:ನಗರಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಡಿಸೆಂಬರ್ 3ರಂದು ದೆಹಲಿಯಲ್ಲಿ ನಡೆಯಲಿರುವ ನರ್ಮ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಜೈರಾಮ್ ರಮೇಶ್ ಅವರ ಜೊತೆ ಚರ್ಚಿಸಿ ಯೋಜನೆ ವ್ಯಾಪ್ತಿಯನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಸಂದರ್ಭದಲ್ಲಿ,ಮಂಗಳೂರನ್ನು ಯೋಜನೆಯಡಿ ತರಲು ಯತ್ನಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದ ಅಭಿವೃದ್ಧಿ ಕಾಮ ಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,ಮಂಗಳೂರನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ನರ್ಮ ಯೋಜನೆ ವ್ಯಾಪ್ತಿಗೆ ನಗರವನ್ನು ಸೇರಿಸಲು ಕೇಂದ್ರ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರಲ್ಲದೆ, ನಗರಾಭಿವೃದ್ಧಿ ನೀತಿ,ವೃಂದ ಮತ್ತು ನೇಮಕಾತಿ ಕಾನೂನು,ದಿನಗೂಲಿ ನೌಕರರ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು. ನಗರದ ಬಹುಮಹಡಿ ಕಟ್ಟಡಗಳಲ್ಲಿ ಕಳೆದ ಒಂದು ವರ್ಷದಿಂದ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಉತ್ತರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ಎಸ್ ಎಸ್ ಎಲ್ ಸಿ ಪರೀಕ್ಷೆಗೆ 16 ವರ್ಷ ಕಡ್ಡಾಯದ ಬಗ್ಗೆ ಯಾವುದೇ ಗೊಂದಲಗಳು ಬೇಡ;ಈಗ ಎಲ್ಲರಿಗೂ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು;ಸುಮಾರು 17,000 ಮಕ್ಕಳಿದ್ದು ಇವರಿಗೆ ಪರೀಕ್ಷೆ ಬರೆಯಲು ತೊಂದರೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಆದರೆ ಈ ವರ್ಷದಿಂದ ತರಗತಿಗೆ ಸೇರ್ಪಡೆ ಸಂದರ್ಭದಲ್ಲಿ ಮಕ್ಕಳಿಗೆ 5ವರ್ಷ ಹತ್ತು ತಿಂಗಳಾಗಿರಬೇಕು;ಈ ಬಗ್ಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೇಮಾರ್, ಶಾಸಕ ಯೋಗೀಶ್ ಭಟ್, ಹಿರಿಯ ಸಲಹೆಗಾರರಾದ ಡಾ. ಎ.ರವೀಂದ್ರ,ಮೇಯರ್ ಶಂಕರ್ ಭಟ್,ಡಿಸಿ ಪೊನ್ನುರಾಜ್,ಮನಾಪ ಕಮಿಷನರ್ ಡಾ. ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಮಂಗಳೂರು,ನ.25:ಮುಖ್ಯಮಂತ್ರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ನೀಡಿರುವ ಒಂದು ಕೋಟಿ ರೂ.ಗಳಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ನಗರ ಭೇಟಿ ಸಂದರ್ಭದಲ್ಲಿ ಸಾರ್ವ ಜನಿಕ ರಿಂದ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದರು. ಜನವರಿ 15ರೊಳಗೆ ದೇಶದಲ್ಲೇ ಪ್ರಥಮ ಎನಿಸುವಂತಹ ನಗರಾಭಿವೃದ್ಧಿ ನೀತಿ ಜಾರಿಗೆ ತರುವ ಬಗ್ಗೆಯೂ ತಿಳಿಸಿದರು. ರಸ್ತೆ ಅಗಲೀ ಕರಣದಿಂದ ಕೆಳ ಮಧ್ಯಮ ವರ್ಗದ ಜನರಿಗೆ ಆಗಿರುವ ಸಮಸ್ಯೆಗಳ ಹಾಗೂ ಸೆಲ್ಫ್ ಅಸೆಸ್ ಮೆಂಟ್ ಬಗ್ಗೆಯೂ ಸಂಬಂಧ ಪಟ್ಟವರ ಸಭೆಯನ್ನು 5-6 ದಿನಗಳೊಳಗೆ ಕರೆದು ಚರ್ಚಿಸುವ ಭರವಸೆ ನೀಡಿದರು.
ಕೃಷಿ ಮಾಹಿತಿ ಸಪ್ತಾಹ ಉದ್ಘಾಟನೆ ಮಂಗಳೂರು,ನ.23:ಜಾಗತಿಕ ಆರ್ಥಿಕ ವ್ಯವಸ್ಥೆಯಿಂದ ರೈತನ ಜೀವನ ಮಟ್ಟ ಕುಸಿದಿದ್ದು, ಕೃಷಿಕರ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ವಿಪಕ್ಷ ಮುಖ್ಯ ಸಚೇತಕರು ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಅಭಯಚಂದ್ರ ಜೈನ್ ಅವರು ಹೇಳಿದ್ದಾರೆ. ಅವರು ದ.ಕ.ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ಸ್ಪಪ್ತಾಹ ಕಾರ್ಯಕ್ರಮವನ್ನು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ರೈತನ ಅದರಲ್ಲೂ ಸಣ್ಣ ಹಿಡುವಳಿದಾರನ ಜೀವನ ಕಷ್ಟವಾಗಿದ್ದು, ಬೆಳೆಗಳಿಗೆ ತಗುಲುವ ರೋಗ, ಕೃಷಿ ಮಾಹಿತಿ ಕೊರತೆ, ಆಧುನಿಕ ತಂತ್ರಜ್ಞಾನದ ಬಳಕೆ ತಿಳಿದಿಲ್ಲದಿರುವುದು ಕಾರಣವಾಗಿದ್ದು,ಕೃಷಿಕರಿಗೆ ಪೂರಕ ಮಾಹಿತಿ ನೀಡಲು ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕಿದೆ ಎಂದರು. ಪಂಚವಾರ್ಷಿಕ ಯೋಜನೆ ಗಳಿಂದಾಗಿ ಕೃಷಿ,ನೀರಾವರಿ ಅಭಿವೃದ್ಧಿಯಾ ಯಿತಾದರೂ ಜನಸಂಖ್ಯೆ ಪ್ರಮಾಣ ಹೆಚ್ಚಿದಂತೆ ಕೃಷಿ ಭೂಮಿ ಕಡಿಮೆಯಾಯಿತು;ಪ್ರಕೃತಿ ವಿಕೋಪದಿಂದ ಆಹಾರೋತ್ಪಾದನೆ ಕುಂಠಿತಗೊಂಡಿತು.ಉಳುವವನೇ ಹೊಲದೊಡೆಯನಾದರೂ ವಿನೂತನ ಸಮಸ್ಯೆಗಳಿಂದಾಗಿ ದೇಶದ ಬೆನ್ನೆಲುಬೆಂದು ಗುರುತಿಸಲ್ಪಡುವ ರೈತರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಸರ್ಕಾರ ರೈತ ಪರ ಯೋಜನೆಗಳನ್ನು ಹಮ್ಮಿಕೊಂಡು ಅವರಿಗೆ ನೆರವಾಗಬೇಕೆಂದರು. ಉದ್ಯೋಗಖಾತ್ರಿ ಕಾಯಿದೆಯ ಸದುಪಯೋಗವನ್ನು ರೈತರು ಪಡೆಯಬೇಕೆಂದು ಕರೆ ನೀಡಿದ ಅವರು, ರೈತರು ಬಾಳು ಹಸನಾಗುವುದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿಯವರು ವಹಿಸಿದ್ದರು.ಜಿ.ಪಂ.ಸದಸ್ಯರಾದ ಶೈಲ ಸಿಕ್ವೇರಾ,ತಾ.ಪಂ. ಸದಸ್ಯ ಜಿ ಎಂ.ಮಹಮದ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಹಾಯಕ ನಾಗಪ್ಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೃಷಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವಿತ್ತು.ಕೃಷಿ ವಸ್ತು ಪ್ರದರ್ಶನದಲ್ಲಿ ರೈತರಿಗೆ ಅನುಕೂಲವಾಗುವ ಮಾಹಿತಿಗಳನ್ನು ನೀಡಲಾಗಿತ್ತು.
ಮಂಗಳೂರು,ನ.21:ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸಮಾಜ ದ್ರೋಹಿಗಳಿಂದ ಅಹಿತಕರ ಘಟನೆಗಳು ನಡೆಯುತ್ತಿದ್ದು,ಜನರು ಈ ಬಗ್ಗೆ ಪ್ರತಿಕ್ರಿಯಿಸದೆ ಪೊಲೀಸರಿಗೆ ಪ್ರತಿಕ್ರಿಯಿಸಲು,ಕ್ರಮಕೈಗೊಳ್ಳಲು ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮನವಿ ಮಾಡಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಅಶಾಂತಿಗೆ ಯತ್ನಿಸುತ್ತಿರುವುದು ಸ್ಪಷ್ಟವಾಗಿದ್ದು, ಜನರು ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಮಂಗಳೂರು,ನ.20:ನಗರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದು,ನಮ್ಮ ಪ್ರದೇಶ ವ್ಯಾಪ್ತಿಯ ಗ್ರಂಥಾಲಯಗಳನ್ನು ಸುಸ್ಜಜ್ಜಿತವಾಗಿಡಲು ಮತ್ತು ಮೊಬೈಲ್ ಗ್ರಂಥಾಲಯಗಳ ಅಭಿವೃದ್ಧಿಗೆ ಸರ್ವ ಆರ್ಥಿಕ ನೆರವನ್ನು ನೀಡುವುದಾಗಿ ಮಹಾನಗರಪಾಲಿಕೆ ಮೇಯರ್ ಶಂಕರ್ ಭಟ್ ಹೇಳಿದರು.ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು,ಓದುವ ಹವ್ಯಾಸದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು. ಇಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಉರ್ವಸ್ಟೋರ್ ಬಳಿ ಇರುವ ಸಣ್ಣ ಗ್ರಂಥಾಲಯವನ್ನು ಸುಸಜ್ಜಿತ ಮಾರ್ಕೆಟ್ ನಿರ್ಮಾಣದ ವೇಳೆ ಮೂಡಾದಲ್ಲಿರುವ ಸಣ್ಣ ಪ್ರದೇಶವನ್ನು ಎರಡೂವರೆ ಲಕ್ಷ ರೂ.ಗಳಲ್ಲಿ ನವೀಕರಣಗೊಳಿಸಿ ಸ್ಥಳಾಂತರಿಸಲಾಗುತ್ತದೆ.ಕೇಂದ್ರ ಗ್ರಂಥಾಲಯಕ್ಕೆ ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು ಇದಕ್ಕಾಗಿ ನೀಲಾ ನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. ವೈಜ್ಞಾನಿಕ ಯುಗದಲ್ಲಿ ನಾವು ಎಷ್ಟೇ ಮುಂದುವರಿದರೂ,ಪುಸ್ತಕವನ್ನು ಹಾಗೇ ಓದುವ ದಾಹ ಯುವ ಸಮುದಾಯಕ್ಕಿದೆ.ಆನ್ ಲೈನ್ ಓದಿಗಿಂತ ಪುಸ್ತಕವಾಗಿ ಓದುವ ರೀತಿಯಲ್ಲಿ ವ್ಯತ್ಯಾಸವಿದೆ ಎಂದ ಅವರು ನಗರದ ಗ್ರಂಥಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆಯನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು, ಸಾರ್ವಜನಿಕ ಗ್ರಂಥಾಲಯಗಳಿಂದ ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಸಹಕಾರಿಯಾಗಿದ್ದು, ಅವರ ಓದುವ ಆಸೆಯನ್ನು ಇಂತಹ ಗ್ರಂಥಾಲಯಗಳು ಪೂರೈಸುತ್ತಿವೆ.ಗ್ರಂಥಾಲಯಗಳು ಮಾಹಿತಿ ಕೋಶಗಳು ಇವುಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯ ನೆರವು ನೀಡುವ ಭರವಸೆಯನ್ನು ಅವರು ನೀಡಿದರು. ಮಹಾ ನಗರ ಪಾಲಿಕೆ ಸದಸ್ಯ ರಂಗನಾಥ್ ಕಿಣಿ, ಮಂಗಳೂರು ವಿವಿಯ ಗ್ರಂಥಪಾಲಕ ಡಾ. ಎಂ.ಕೆ.ಭಂಡಿ, ಬದ್ರಿಯಾ ಕಾಲೇಜಿನ ಪ್ರಾಚಾರ್ಯ ಡಾ.ಎನ್. ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿದ್ದರು.ಮನಾಪ ಸದಸ್ಯ ಮೋಹನ್ ಕುಮಾರ್ ನಿವೃತ್ತ ಗ್ರಂಥಪಾಲಕ ಕೆ.ವಾಮನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಗ್ರಂಥಾಲಯಧಿಕಾರಿ ವೆಂಕಟೇಶ್ ಸ್ವಾಗತಿಸಿದರು. ಉಪನಿರ್ದೇಶಕ ದಿವಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಮತ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು,ನ.20:ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಇಲಾಖೆಗಳ ನಡುವೆ ಸಹಕಾರ ಹಾಗೂ ಸಮನ್ವಯದ ಅಗತ್ಯವಿದೆ; ಇಲ್ಲದಿದ್ದರೆ ಪ್ರದೇಶ ಅಭಿವೃದ್ಧಿ ಕುಂಠಿತವಾಗಿ ಜನರು ತೊಂದರೆಗೊಳಪಡುತ್ತಾರೆ;ಹೀಗಾಗದಂತೆ ಸಮನ್ವಯ ಹಾಗೂ ಸಮಯಮಿತಿ ನಿಗದಿಪಡಿಸಿ ಯೋಜನೆಗಳನ್ನು ಸಂಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಅವರು ಹೇಳಿದರು. ಇಂದು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 4 ತಿಂಗಳಿಂದ ಸಮುದ್ರದಲ್ಲಿ ಸಿಲುಕಿರುವ ಏಷಿಯನ್ ಫಾರೆಸ್ಟ್ ಶಿಪ್ ಅನ್ನು ಮೇಲೆತ್ತುವ ಪ್ರಗತಿಯಾಗಿಲ್ಲ.ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ 5 ದಿನಗಳೊಳಗೆ ಈ ಸಂಬಂಧ ಸಮೀಕ್ಷೆ ಮುಗಿಸಿ ವರದಿಯ ನಕಲನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಿದರು.ರಸ್ತೆ ಅಭಿವೃದ್ಧಿ ಮತ್ತು ಅರಣ್ಯ ಇಲಾಖೆ ಕಾರ್ಯ ವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರಲ್ಲದೆ, ಅದರಲ್ಲೂ ಮುಖ್ಯವಾಗಿ ಸುಳ್ಯಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮವನ್ನು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದಾಗ,ಸಮಸ್ಯೆ ಪರಿಹರಿಸುವ ಭರವಸೆಯನ್ನು ಡಿ ಎಫ್ ಒ ಅವರು ಸಭೆಗೆ ನೀಡಿದರು.ಕಾನೂನು ಪಾಲನೆಯ ಜೊತೆ ಜನಹಿತವನ್ನು ಗಮನದಲ್ಲಿರಿಸಿ ಇಲಾಖೆಗಳ ನಡುವೆ ಪರಸ್ಪರ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ನಿಗದಿತ ಗುರಿ ಹಾಗೂ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸಲಹೆ ಮಾಡಿದರು. ಜಿಲ್ಲೆಯ ಬಹುಮುಖ್ಯ ಸಮಸ್ಯೆಯಾದ ರಸ್ತೆಗಳ ದುರಸ್ತಿ ಬಗ್ಗೆ ನಡೆದ ಸುದೀರ್ಘ ಚರ್ಚೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಹೊಣೆಯನ್ನು ಸಂಪೂರ್ಣವಾಗಿ ನಿರ್ವಹಿಸದೆ ನುಣುಚಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾವು ನಮ್ಮ ಮುಖ್ಯ ಕಚೇರಿಯ ನಿಯಮಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ;ಆದರೆ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ನಮ್ಮೊಂದಿಗೆ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.ಎನ್ ಎಚ್ ಎ ಐ ಹೆದ್ದಾರಿ ನಿರ್ಮಿಸುವಾಗ ರೂಪಿಸಿರುವ ಯೋಜನೆಯ ಸಮರ್ಪಕವಾಗಿಲ್ಲದೆ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಅವರು ಪೂರ್ವಯೋಜಿತವಾಗಿ ಮಾರ್ಕಿಂಗ್ ಮಾಡದೆ ಇರುವುದರಿಂದ ಆಗಾಗ ಜಿಲ್ಲಾಡಳಿತ ಸ್ವಲ್ಪ ಸ್ವಲ್ಪವೇ ಭೂಸ್ವಾಧೀನ ಮಾಡಬೇಕಾದ ಅಗತ್ಯ ಒದಗಿಬಂತಲ್ಲದೆ,ಪ್ರಾಜೆಕ್ಟ್ ಡೈರಕ್ಞರ್ ಗಳಿಗೆ ಯೋಜನೆಯ ಸಮರ್ಪಕ ಚಿಂತನೇ ಇಲ್ಲ;ಜನರ ಪ್ರಶ್ನೆಗಳಿಗೀಗ ಜಿಲ್ಲಾಡಳಿತ ಉತ್ತರಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಯುಟಿಲಿಟಿ ಪ್ರದೇಶ(ಟೆಲಿಫೋನ್ ಲೈನ್,ನೀರು ಪೂರೈಕೆ ಕೊಳವೆ,ಮೆಸ್ಕಾಂ ಸ್ಥಳಾಂತರ)ವನ್ನು ಸರಿಯಾಗಿ ಗುರುತಿಸದೆ ಯೋಜನೆ ಅಸರ್ಮಪಕವಾಗಿದ್ದು,ತುಂಬೆ-ಬಂಟ್ವಾಳ, ಮಂಗಳೂರು-ಸುರತ್ಕಲ್ ನಡುವೆ ಬಹಳಷ್ಟು ಸಮಸ್ಯೆಗಳಾಗಿವೆ. ಈ ಸಂಬಂಧ ನವೆಂಬರ್ ಒಂದರಂದು ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಥೂರ್ ಅವರ ಜೊತೆಯೂ ಚರ್ಚಿಸಿರುವರು. ನಂತೂರು - ಬಿಕರ್ನಕಟ್ಟೆ,ಕೊಟ್ಟಾರ ಫ್ಲೈ ಓವರ್ ಕಾಮಗಾರಿಯ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕರ್ನಾಟಕ ಸ್ಟೇಟ್ ವೈಡ್ ನೆಟ್ ವರ್ಕ್ ಸೇವೆಯನ್ನು ಈ ತಿಂಗಳಾಂತ್ಯದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು,ರಾಷ್ಟ್ರದಲ್ಲೇ ಪ್ರಥಮವಾದ ಈ ಅತ್ಯಾಧುನಿಕ ಯೋಜನೆ ಸರ್ಕಾರಿ ಇಲಾಖೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ವಿವರಿಸಿದರು. ಉದ್ಯೋಗಖಾತ್ರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ.ಗಳ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಅವರು ನುಡಿದರು.ಮಂಗಳೂರು-1ಯೋಜನೆಯು ಡಿಸೆಂಬರ್ 15ರೊಳಗೆ ಮುಗಿಯಲಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಭರದಿಂದ ನಡೆಯುತ್ತಿದೆ ಎಂದು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅಡಿಷನಲ್ ಎಸ್ ಪಿ, ಅಡಿಷನಲ್ ಡಿಸಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು,ನ.17:ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇತರ ಒಕ್ಕೂಟಗಳಿಗೆ ಮಾದರಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದು ಒಕ್ಕೂಟದ ಅಭಿವೃದ್ಧಿಗೆ 50 ಕೋಟಿ ರೂ. ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಏರ್ಪಡಿಸಿದ್ದ 6ಕೆಜಿ ನಂದಿನಿ ಮೊಸರು ಜಂಬೋ ಪ್ಯಾಕೆಟ್ ಬಿಡುಗಡೆ ಮಾಡಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ನಂದಿನಿ ಹಾಲು ವಿದೇಶದಲ್ಲೂ ಜನಪ್ರಿಯವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರದಲ್ಲಿ ಅತ್ಯುನ್ನತ ಸ್ಥಾನ ಪಡೆಯಲಿದೆ ಎಂದರು.ಸಮಾರಂಭದಲ್ಲಿ ಡಾ.ಶಾಂತರಾಮ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ರಾಜ್ಯ ಸಹಕಾರ ಇಲಾಖೆಯ ನಿಬಂಧಕ ಆರ್ ಎಸ್ ನೂಲಿ, ಒಕ್ಕೂಟದ ಅಧ್ಯಕ್ಷ ಪಿ.ಬಿ.ದಿವಾಕರ್ ರೈ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಭಾಗವಹಿಸಿದ್ದರು.
ಮಂಗಳೂರು,ನ.16: ಸಮಾಜವನ್ನು ತಿದ್ದುವ ಕಾರ್ಯ ಮಾಧ್ಯಮಗಳಿಂದ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೇಮಾರ್ ಹೇಳಿದ್ದಾರೆ. ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ವಾರ್ತಾ ಇಲಾಖೆಯು ಸೋಮವಾರ ಆಯೋಜಿಸಿದ್ದ "ಸಾಮಾಜಿಕ ಸೌಹಾರ್ದತೆಯಲ್ಲಿ ಮಾಧ್ಯಮಗಳ ಪಾತ್ರ" ವಿಚಾರ ಸಂಕಿರಣವನ್ನು ಇಲಾಖೆಯ ಪತ್ರಿಕಾ ಕೊಠಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು.ಮಾಹಿತಿಯ ಮಹಾಪೂರವನ್ನೇ ಹರಿಸುವ ಮಾಧ್ಯಮಗಳು ಸುದ್ದಿ ನೀಡುವ ಪೈಪೋಟಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮಾತನಾಡಿ,ಸಾಮಾಜಿಕ ಸೌಹಾರ್ದತೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು.ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಧನಾತ್ಮಕ ವಿಷಯಗಳ ಕಡೆಗೆ ಗಮನ ಹರಿಸಬೇಕಾಗಿರುವುದು ಅಗತ್ಯ ಎಂದರು. ಮಂಗಳೂರು ಮೇಯರ್ ಶಂಕರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಪತ್ರಿಕೆಗಳು,ವಿದ್ಯುನ್ಮಾನ ಮಾಧ್ಯಮಗಳು ವರದಿಗಾರಿಕೆಯಲ್ಲಿ ವಸ್ತು ನಿಷ್ಠತೆಯ ಕಡೆಗೆ ಗಮನಹರಿಸಲಿ.ವಿಷಯದ ಬಗ್ಗೆ ಮಾಧ್ಯಮಗಳೇ ತೀರ್ಪು ಕೊಡುವುದು ಸಲ್ಲದು. ಮಾತು ಮತ್ತು ಕೃತಿಯಲ್ಲಿ ಸಾಮ್ಯತೆ ಇರಲಿ ಎಂದು ನುಡಿದರು. ಮಂಗಳೂರು ಶಾಸಕ ಯೋಗೀಶ್ ಭಟ್ ,ಆರೋಗ್ಯವಂತ ಸಮಾಜದ ಅಭಿವೃದ್ದಿಯ ಬಗ್ಗೆ ಮಾಧ್ಯಮಗಳು ಸಮಗ್ರವಾಗಿ,ಚಿಂತನೆ ನಡೆಸಲಿ ಎಂದು ಹೇಳಿದರು. ಪಡೀಲ್ ಅಮೃತ ಕಾಲೇಜಿನ ಆಡಳಿತಾಧಿಕಾರಿ ತಾರನಾಥ ಕಾಪಿಕಾಡ್ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ, ಮಾಧ್ಯಮಗಳು ಸುದ್ದಿ ನೀಡುವ ಧಾವಂತದಲ್ಲಿ ನೀತಿ ಸಂಹಿತೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಿದೆ.ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲೂ ಪತ್ರಕರ್ತರು ನೀತಿ ಸಂಹಿತೆಗಳನ್ನು ಪಾಲಿಸಿ ತಮ್ಮ ವೃತ್ತಿ ಘನತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ಸ್ವಾಗತಿಸಿದರು.ಫ್ರಾನ್ಸಿಸ್ ಲೂವಿಸ್ ವಂದಿಸಿದರು. ಪತ್ರಕರ್ತ ಗುರುವಪ್ಪ ಬಾಳೆಪುಣಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು,ನ.15:ಗಡಿನಾಡಲ್ಲಿ,ಹೊರನಾಡಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಕನ್ನಡಿಗರಿಗೆ ವಿಶೇಷ ಸೌಲಭ್ಯಗಳನ್ನು ಅಯವ್ಯಯದಲ್ಲೇ ಘೋಷಿಸಲಾಗಿದ್ದು,ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಜಯರಾಮಜರಾಜೇ ಅರಸ್ ಅವರು ಹೇಳಿದರು. ಅವರು ನ.14 ರಂದು ಕಾಸರಗೋಡಿನ ಬದಿಯಡ್ಕದ ಗುರುಸದನದಲ್ಲಿ ಏರ್ಪಡಿಸಲಾದ ಭಾಷಾ ಭಾವೈಕ್ಯತಾ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿದದರೂ ಗಡಿನಾಡ ಕನ್ನಡಿಗರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಬಹಳ;ರಾಷ್ಟ್ರಕವಿ ಗೋವಿಂದ ಪೈ,ನಾಡೋಜ ಕಯ್ಯಾರ ಕಿಞಣ್ಣ ರೈ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಅವರು,ಒಂದು ಸಂಸ್ಕೃತಿಯ ಉಳಿವು ಭಾಷೆ,ಕಲೆ,ಸಾಹಿತ್ಯದಲ್ಲಿದೆ. ಗಡಿಗಳನ್ನು ಮೀರಿ ಬೆಳೆಯುವ ಸಂಸ್ಕೃತಿಯಿಂದಾಗಿ ಕೊಡು ಕೊಳ್ಳುವಿಕೆಯಲ್ಲೇ ಹಿತ ಅಡಗಿದೆ ಎಂದರು. ಹಲವು ಜ್ಞಾನಪೀಠಗಳಗಳನ್ನು ಪಡೆದ ಶ್ರೀಮಂತ ಭಾಷೆ ಕನ್ನಡ; ಗಡಿನಾಡುಗಳಲ್ಲಿರುವ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯ,ಶಿಕ್ಷಕರ ನೇಮಕ,ಪಠ್ಯ ಪುಸ್ತಕ ಒದಗಿಸುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದ ಅವರು,ಪುಸ್ತಕ ಮೇಳ, ಗ್ರಂಥಗಳ ಅನುವಾದ ಹಾಗೂ ಉತ್ಸವಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಿದೆ.ಇನ್ನಷ್ಟು ಉತ್ತಮ ಕೃತಿಗಳ ಅನುವಾದ ಕಾರ್ಯವಾಗಬೇಕಿದೆ.ವೈಕಂ ಮಹಮದ್ ಬಷೀರ್ ಅಂತಹ ಲೇಖಕರ ಅನುವಾದಿತ ಕನ್ನಡ ಕೃತಿಗಳನ್ನು ಓದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಹಲವು ಭಾಷೆಗಳ ತವರೂರಾದ ನಮ್ಮ ನೆಲದಲ್ಲಿ ಎಲ್ಲದಕ್ಕೂ ಸಮಾನ ಗೌರವ ನೀಡಲು ಅಕಾಡಮಿಗಳನ್ನು ರಚಿಸಲಾಗಿದೆ. ಅಭಿವೃದ್ಧಿ ಪ್ರಾಧಿಕಾರವಿದೆ; ಇವರಿಗೆ ಸಾಕಷ್ಟು ಹಣಕಾಸಿನ ನೆರವನ್ನು ಒದಗಿಸಲಾಗಿದೆ. ವಿವಿಧ ರಾಜ್ಯಗಳಲ್ಲಿರುವ ಕನ್ನಡ ಪೀಠಗಳು ಕನ್ನಡದ ಅಭಿವೃದ್ಧಿಗಾಗಿಯೇ ಕಾರ್ಯೋನ್ಮುಖವಾಗಿದೆ. ಕನ್ನಡಿಗರು ಇತರ ಭಾಷೆಯ ಬಗ್ಗೆ ದ್ವೇಷ ಹೊಂದದೆ ತಮ್ಮ ಭಾಷೆಯ ಬಗ್ಗೆ ಅಭಿಮಾನವಿರಿಸುವುದರಿಂದ ಕನ್ನಡ ಬೆಳೆಯಲು ಸಾಧ್ಯ;ಆಡಳಿತ ಭಾಷೆ ಬೇರೆಯಾಗಿದ್ದರೂ, ಮಾತೃ ಭಾಷೆಯ ಮೇಲೆ ಪ್ರೀತಿ ಇದ್ದರೆ ಇಂತಹ ಸಮ್ಮೇಳನಗಳು ಯಶಸ್ವಿಯಾಗುತ್ತವೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ನಾಡೋಜ ಕಯ್ಯಾರ ಕಿಞಣ್ಣ ರೈ ಅವರು, ಸಮೃದ್ಧ ಸಾಹಿತ್ಯದಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ,ಇಂತಹ ಕಾರ್ಯಕ್ರಮಗಳಿಂದ ಕನ್ನಡ ಬೆಳೆಸಲು ನೆರವಾಗಲಿದೆಯಲ್ಲದೆ ಕನ್ನಡಿಗರ ಸಂತಸಕ್ಕೂ ಕಾರಣವಾಗಲಿದೆ ಎಂದರು. ಸಮಾರಂಭಕ್ಕೆ ಸಂಪೂರ್ಣ ಸಹಕಾರ ನೀಡಿ, ಸಮಾರೋಪದಲ್ಲಿ ಸಾನಿಧ್ಯ ವಹಿಸಿದ್ದ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿಯವರು, ಕರ್ನಾಟಕ ಸರ್ಕಾರ ಕಾಸರಗೋಡಿನ ಕನ್ನಡಿಗರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಹೀನ್ ಕೇಳೋಟ್,ಕಾಸರಗೋಡು ಸಪ್ತಭಾಷೆಯ ಸಂಗಮಭೂಮಿಯಾಗಿದ್ದು, ಭಾಷಾ ವೈಷಮ್ಯ, ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು; ಐಕ್ಯಗಾನದ ಊರಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕೃತಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದರು. ಡಾ.ಶ್ರೀನಿಧಿ ಸರಳಾಯ, ಚಿತ್ರನಟ ನಿರ್ದೇಶಕ ಶಿವಧ್ವಜ್ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಕೃಷ್ಣ ಪೈ ಸ್ವಾಗತಿಸಿ ದರು. ರಾಜೇಶ್ ಆಳ್ವ ವಂದಿಸಿದರು. ಪ್ರಾಧಿಕಾರದ ಸದಸ್ಯರಾದ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಏಳು ದಿನಗಳ ಕಾಲ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಿ ಬಹುಭಾಷಾ ಕವಿಗೋಷ್ಠಿ, ಜನಪದ ಮೆರವಣಿಗೆ, ಗೀತೋತ್ಸವ, ರಂಗೋತ್ಸವ, ನೃತ್ಯೋತ್ಸವ, ಚಿತ್ರೋತ್ಸವ ಏರ್ಪಡಿಸಲಾಗಿತ್ತು. ಸಮಾರೋಪದಂದು ಗಾಯಕರಾದ ರಮೇಶ್ಚಂದ್ರ ನೇತೃತ್ವದಲ್ಲಿ ಗೀತೋತ್ಸವ ನಡೆಯಿತು.
ಮಂಗಳೂರು,ನ.13:ಹೆಚ್ಚುತ್ತಿರುವ ಜನಸಂಖ್ಯೆಯನ್ನಾಧರಿಸಿ ಸಾಕಷ್ಟು ಆಹಾರೋತ್ಪನ್ನಗಳ ಪೂರೈಕೆಗಾಗಿ ರಾಜ್ಯ ಸರ್ಕಾರ ಶೇ.4.5 ರಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದ್ದು,ಗುರಿ ಸಾಧನೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳೆಯ ಪ್ರದೇಶವನ್ನು ಹೆಚ್ಚಿಸುವುದು ಅಸಾಧ್ಯವಾದ್ದರಿಂದ ಹೆಚ್ಚು ಇಳುವರಿ ನೀಡುವ ಬೆಳೆಯ ಬಗ್ಗೆ ಇದಕ್ಕೆ ಪೂರಕವಾಗಿ ಕೃಷಿಕರಿಗೆ ಮಾಹಿತಿ,ಸಬ್ಸಿಡಿ ನೀಡುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಬಳಿಗೆ ಒಂದರಂತೆ ಒಟ್ಟು 17 ರೈತ ಸಂಪರ್ಕ ಕೇಂದ್ರಗಳಿವೆ. ತಾಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ತರಬೇತಿಯನ್ನು ಬೆಳ್ತಂಗಡಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ರೈತರ ಮಣ್ಣು ಪರೀಕ್ಷಿಸಲು ಮಣ್ಣು ಅರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬೆಳ್ತಂಗಡಿಯಲ್ಲಿ ರಸಗೊಬ್ಬರ ಮಾದರಿ ವಿಶ್ಲೇಷಣೆಗೆ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಭತ್ತ 35,000 ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಹಂಗಾಮಿಗೆ 24000 ಹೆ. ಬೇಸಿಗೆಯಲ್ಲಿ 2500 ಹೆಕ್ಟೇರ್ ಸೇರಿದಂತೆ ಒಟ್ಟು 61500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ.ಹಿಂಗಾರು ಹಂಗಾಮಿನಲ್ಲಿ ಉದ್ದು 1500 ಹೆಕ್ಟೇರ್,ಹೆಸರು,ಅಲಸಂಡೆ ಮತ್ತು ಹುರುಳಿ 200 ಹೆಕ್ಟೇರ್ ನಂತೆ ಒಟ್ಟು 26,100 ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆಯಲಾಗು ತ್ತದೆ.ಬೇಸಿಗೆಯಲ್ಲಿ ಉದ್ದು 1505ಹೆ.,ಹೆಸರು 900,ಅಲಸಂಡೆ 700,ಎಳ್ಳು 710,ಕಬ್ಬು 30 ಎಕರೆ ವ್ಯಾಪ್ತಿಯಲ್ಲಿ ಒಟ್ಟು 6345 ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಬೇಸಿಗೆ ಹಂಗಾಮಿಗೆ ತುಂತುರು ನೀರಾವರಿ ಮುಂತಾದ ನೀರಾವರಿ ವ್ಯವಸ್ಥೆ ಅಳವಡಿಕೆ ಮೂಲಕ ದ್ವಿದಳ ಧಾನ್ಯ/ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ,ಉತ್ಪಾದನೆ ಹೆಚ್ಚಿಸಲಾಗುವುದು. ಕೇಂದ್ರದಿಂದ ಶೇ.40 ಮತ್ತು ರಾಜ್ಯ ವಲಯದಿಂದ ಶೇ.35ರಂತೆ ಒಟ್ಟು ಶೇ.75ರ ರಿಯಾಯಿತಿಯಲ್ಲಿ ಸವಲತ್ತು ಒದಗಿಸಲಾಗುವುದು. ರೈತರಿಗೆ ಉತ್ತಮ ಗುಣಮಟ್ಟದ ಬೀಜ,ಸಾವಯವ ಕೃಷಿ ಪರಿಕರ, ರಸಗೊಬ್ಬರ, ಸಸ್ಯಸಂರಕ್ಷಣಾ ಔಷಧಿ ಉಪಕರಣ ಪೂರೈಸಲಾಗುವುದಲ್ಲದೆ, ಮಣ್ಣಿನ ಫಲವತತ್ತೆಗೆ ಆದ್ಯತೆ ನೀಡಲಾಗುವುದು. ಆತ್ಮ ಯೋಜನೆಯನ್ನು ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಶೇ. 33 ಮಹಿಳಾ ರೈತರಿಗೆ ಆದ್ಯತೆ. ಶೇ.22ರಷ್ಟು ಪ.ಜಾತಿ ಮತ್ತು ಪಂಗಡ ರೈತರಿಗೆ ಮೀಸಲು. ಶೇ.10ರಿಂದ 15ರಷ್ಟು ಅಲ್ಪಸಂಖ್ಯಾತ ರೈತರಿಗೆ ಹಾಗೂ ಶೇ.3ರಷ್ಟು ಅಂಗವಿಕಲರಿಗೆ ನೀಡಲಾಗುವುದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮಂಗಳೂರು,ನ.13:ಆಂಧ್ರಪ್ರದೇಶ ಹ್ಯಾಂಡಿಕ್ರಾಫ್ಟ್ಸ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ ಸರ್ಕಾರದ ಜವಳಿ ಮಂತ್ರಾಲಯ ಜಂಟಿಯಾಗಿ ನಗರದ ಹೊಟೆಲ್ ವುಡ್ ಲ್ಯಾಂಡ್ಸ್ ನಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ನವೆಂಬರ್ 5ರಂದು ಮೇಯರ್ ಶಂಕರ್ ಭಟ್ ಅವರು ಉದ್ಘಾಟಿಸಿದರು. ನವೆಂಬರ್ 16ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ಮ್ಯಾನೇಜರ್ ಕೆ.ವಿ.ಸುಬ್ಬಣ್ಣ ತಿಳಿಸಿದ್ದಾರೆ.
ಮಂಗಳೂರು,ನ.10:ಆಗ್ನೇಯ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ 48 ಗಂಟೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು,ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ವಾಯುವ್ಯ ಮತ್ತು ಕರಾವಳಿ ಕರ್ನಾಟಕದಲ್ಲಿ ಮುಂದಿನ 12 ಗಂಟೆಗಳಲ್ಲಿ ಮಳೆ ತೀವ್ರತೆ ಪಡೆದುಕೊಳ್ಳಲಿದ್ದು, 45 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ. ಆದ್ದರಿಂದ ಮೀನುಗಾರರಿಗೆ ವಿಶೇಷವಾಗಿ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.
ಮಂಗಳೂರು,ನ.7:ಭಾವನಾತ್ಮಕವಾಗಿ ನಾವು ಭಾರತೀಯರೆಲ್ಲ ಒಂದು;ಅಖಂಡ ಭಾರತ ತ್ರಿಭಾಷಾ ಸೂತ್ರಕ್ಕೆ ಬದ್ಧವಾಗಿದ್ದು,ಭಾಷೆ,ನೀರಿನಲ್ಲಿ ರಾಜಕೀಯ ಬೆರೆಸದೆ ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು. ಅವರು ಇಂದು ಕಾಸರಗೋಡಿನ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಏಳು ದಿನಗಳ ಭಾಷಾ ಭಾವೈಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭೌಗೋಳಿಕ ಅಗತ್ಯಕ್ಕೆ ಅನುಗುಣವಾಗಿ, ವ್ಯವಹಾರಕ್ಕೆ ಅನುಕೂಲವಾಗಿ ಭಾಷಾ ಪ್ರಾಂತ್ಯಗಳು ರಚನೆಯಾದವೇ ವಿನ: ನಾವು ಮೇಲು, ನಮ್ಮ ಭಾಷೆ ಮಾತ್ರ ಮೇಲು ಎಂದು ಹೊಡೆದಾಡಲು ನಮ್ಮ ರಾಜ್ಯಗಳು ರೂಪಿಸಲ್ಪಟ್ಟಿಲ್ಲ.ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದು ದುರಂತ ಎಂದ ಅವರು, 45ರಿಂದ 50ಭಾಷೆಗಳಿರುವ ನಮ್ಮ ರಾಜ್ಯದ ಭಾಷಾ ಶ್ರೀಮಂತಿಕೆ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು. ಗಡಿ ಪ್ರದೇಶಗಳಲ್ಲಿ ಈ ಬಹುಭಾಷಾ ಸಂಸ್ಕೃತಿಯನ್ನು ಕೊಡು- ಕೊಳ್ಳುವಿಕೆಯ ಮೂಲಕ ಇನ್ನಷ್ಟು ಬಲಿಷ್ಠವಾಗಿ ನಮ್ಮ ನಡುವೆ ಸಂಬಂಧ ರೂಪುಗೊಳ್ಳಬೇಕು. ಇದಲ್ಲದೆ ನಾವು ಅಲ್ಲಿ ಸೇರಿಲ್ಲ;ಇಲ್ಲಿ ಸೇರಿಲ್ಲ ಎಂಬ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಹಲವು ಸಮಸ್ಯೆಗಳಿಗೆ ಪರಸ್ಪರ ವಿಶ್ವಾಸದಿಂದ ಸ್ನೇಹದಿಂದ ಮಾತುಕತೆಯಿಂದ ಪರಿಹಾರ ಸಾಧ್ಯ ಎಂದರು.ನಮ್ಮಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು,ಇದಕ್ಕಾಗಿ ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕೊಡಿಸಲು, ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಲು, ಉದ್ಯೋಗದಲ್ಲಿ ಆದ್ಯತೆ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಧಾನಸಭಾ ಸದಸ್ಯ ಸಿ ಟಿ ಅಹಮದಾಲಿ ಅವರು ಮಾತನಾಡಿ, ಬಹುಭಾಷಾ ಸಂಗಮಭೂಮಿ,ಸಾಂಸ್ಕೃತಿಕ ರಂಗಭೂಮಿಯಾಗಿರುವ ಕಾಸರಗೋಡಿನಲ್ಲಿ ವಿವಿಧ ಸಮುದಾಯಗಳು ಪರಸ್ಪರ ಸಹಕಾರ,ಸೌಹಾರ್ದತೆಯಿಂದ ಬಾಳುತ್ತಿದ್ದು,ಇದನ್ನು ಇನ್ನಷ್ಟು ಶಕ್ತಗೊಳಿಸಲು ಭಾಷೆ, ಮತದ ಕಟ್ಟುಪಾಡುಗಳನ್ನು ಮೀರಿ ಬೆಳೆಯಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.ಕನ್ನಡದ ರಂಗಕಲಾವಿದರು,ಯಕ್ಷಗಾನ ಕಲಾವಿದರು,ಬರಹಗಾರರು ಸಮೃದ್ಧ ಸಾಹಿತ್ಯವನ್ನು ಕೇರಳಕ್ಕೆ ನೀಡಿದ್ದು, ಕನ್ನಡಿಗರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ನೀಡಿದರು. ಏಳು ನುಡಿಗಳನ್ನಾಡುವ ಕಾಸರಗೋಡಿನಲ್ಲಿ ರಂಗೋತ್ಸವ, ಸಿನಿಮೋತ್ಸವ,ಗೀತೋತ್ಸವ,ನೃತ್ಯೋತ್ಸವದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದು, ಇದಕ್ಕೆ ಎಲ್ಲಾ ಕನ್ನಡಪರ ಸಂಘಟನೆಗಳು ಸಹಕರಿಸಿವೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಧಿಕಾರದ ಸದಸ್ಯ ಸುರೇಶ್ ಪ್ರಾಸ್ತಾವಿಕವಾಗಿ ಹೇಳಿದರು.22 ಕವಿಗಳು ಗೋವಿಂದಪೈ ಅವರ ಗಿಳಿವಿಂಡಿನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆಯಲ್ಲದೆ ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ರಂಗೋತ್ಸವ, ಸಿನಿಮೋತ್ಸವಗಳನ್ನು ಆಯೋಜಿಸಲಾಗಿದೆ ಎಂದರು.ಇದರಲ್ಲಿ ನಾಡಿನೆಲ್ಲಡೆಯಿಂದ ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ ಎಂದರು. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರಲ್ಲದೆ ಸಭಾ ಕಾರ್ಯಕ್ರಮಕ್ಕೆ ಮೊದಲು ಬಹುಭಾಷಾ ಜನಪದ ಮೆರವಣಿಗೆಯನ್ನು ಅವರು ಉದ್ಘಾಟಿಸಿದರು. ಲೋಕಸಭಾ ಸದಸ್ಯ ಕರುಣಾಕರನ್ ಉಪಸ್ಥಿತರಿದ್ದರು. ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕುರಾಯ ಸ್ವಾಗತಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿಷ್ಣು ನಾಯಕ್, ಕಾರ್ಯದರ್ಶಿ ಶಾಂತರಾಜು, ನ್ಯಾಯವಾದಿ ಐ ವಿ ಭಟ್, ಶ್ರೀಮತಿ ಚಂದ್ರು ಭಾಗವಹಿಸಿದ್ದರು.ಎಸ್ ವಿ ಭಟ್ ವಂದಿಸಿದರು.ಸುಂದರವಾದ ಜನಪದ ಮೆರವಣಿಗೆಯಲ್ಲಿ ಕೇರಳದ ಚೆಂಡೆ ಮದ್ದಳೆ,ಶಾಲಾ ಮಕ್ಕಳ ತಂಡ, ಮಂಡ್ಯದ ಪೂಜಾಕುಣಿತ, ಪಟಕುಣಿತ,ಚಿಕ್ಕಮಗಳೂರಿನ ವೀರಗಾಸೆ,ಶಿವಮೊಗ್ಗದ ಡೊಳ್ಳು,ದುಡ್ಡಿಕುಣಿತ, ತಮಟೆ,ದಪ್,ಆಟಿ ಕಳಂಜಾವನ್ನೊಳಗೊಂಡ ಬಹುಭಾಷಾ ಮೆರವಣಿಗೆ ನಗರದಲ್ಲಿ ನಡೆಯಿತು.
ಮಂಗಳೂರು,ನ.6:ಶೈಕ್ಷಣಿಕ ಸಂಸ್ಥೆಗಳನ್ನು ಹೇಗೆ ಕಟ್ಟಿ ಬೆಳೆಸಬೇಕೆಂಬುದಕ್ಕೆ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಹಾಜಬ್ಬರ ಅಕ್ಷರ ಪ್ರೀತಿಗೆ ಪ್ರೋತ್ಸಾಹಕ ವಾಗಿ ಅವರ ಹರೇಕಳ ನ್ಯೂಪಡ್ಪುವಿಗೆ ಪಿಯು ಕಾಲೇಜನ್ನು ಮಂಜೂರು ಮಾಡಿಸುವ ಭರವಸೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀಡಿದರು. ಅವರು ಇಂದು ಹರೇಕಳ-ನ್ಯೂಪಡ್ಪುವಿನ ಶಾಲಾ ಆಟದ ಮೈದಾನ ಉದ್ಘಾಟಿಸಿ ಮಾತನಾಡುತ್ತಿದ್ದರು.ಅಕ್ಷರ ಸಂತ ಹಾಜಬ್ಬರಿಂದ ಇಲ್ಲಿನ ಶಾಲೆಗೆ ರಾಷ್ಟ್ರ ಮಟ್ಟದ ಕೀರ್ತಿ ಬಂದಿದ್ದು,ಈ ಶಾಲೆಯ ಅಭಿವೃದ್ಧಿಗೆ ಎಲ್ಲರ ನೆರವು ದೊರಕಿದೆ.ಸಂಸದರ ನಿಧಿಯಿಂದ ಸಾಧ್ಯವಿರುವ ನೆರವು ಹಾಗೂ ಪಿಯುಸಿ ಕಾಲೇಜು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಸದರು ನೀಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದ ನುಡಿದರು. ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಸದಸ್ಯರಾದ ಅಜೀಜ್ ಮಲ್ಹಾರ್,ತಾ.ಪಂ.ಅಧ್ಯಕ್ಷ ರಾಮಚಂದ್ರ ಕುಂಪಲ, ಸಿಇಒ ಶಿವಶಂಕರ್, ವಿದ್ಯಾಂಗ ಉಪನಿರ್ದೇಶಕ ಚಾಮೇಗೌಡ,ಶಾಲೆಗೆ ನೆರವು ನೀಡಿದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು,ನ.5:ಸೋಮೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ನೂರು ಎಕರೆಗೆ ಹೆಚ್ಚಿನ ಸರ್ಕಾರಿ ಜಮೀನಿನಲ್ಲಿ ಸಿ ಆರ್ ಝಡ್ ಕಾನೂನು ಉಲ್ಲಂಘಿಸಿ ಹಾಗೂ ಸರ್ಕಾರಿ ಜಮೀನನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರ ನಿರ್ದೇಶನದಂತೆ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಸೋಮೇಶ್ವರ ಸಮುದ್ರ ತೀರದಲ್ಲಿ ಸರ್ಕಾರಿ ಜಮೀನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಹರೀಶ್ ಉಚ್ಚಿಲ ,ಕಮಲ,ಮೀರ್ ಇಮ್ತಿಯಾಜ್ ಅಹಮದ್ ಅವರ ಕಟ್ಟಡಗಳನ್ನು ತೆರವುಗೊಳಿಸಿದ್ದು, ಸುತ್ತಮುತ್ತಲಿನ 4 ಕಾಂಪೌಂಡ್ ಗೋಡೆಗಳನ್ನು ಕೆಡವಲಾಗಿದೆ.ಅಜಿತ್ ಮಲ್ಲಿ,ಪ್ರಮೋದ್ ರೈ,ಜೋಸೆಫ್ ಸಲ್ಡಾನಾ ಅವರು ಕಟ್ಟಡ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಈ ಮೂರು ಹೊರತುಪಡಿಸಿ ಉಳಿದೆಲ್ಲ ಅಕ್ರಮ ಕಟ್ಟಡಗಳನ್ನು ಇಂದು ತೆರವುಗೊಳಿಸಲಾಗುವುದು ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೊನ್ನುರಾಜ್, ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಉಪಸ್ಥಿತರಿದ್ದರು, ಸ್ಥಳದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳ ಬಿಗು ಬಂದೋಬಸ್ತು ಏರ್ಪಡಿಸಿತ್ತು.
ಮಂಗಳೂರು,ನ.3:ಸಾರ್ವಜನಿಕರು ಮತ್ತು ವಾಹನ ಬಳಕೆದಾರರಲ್ಲಿ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ ತಿಂಗಳನ್ನು ಮಾಲಿನ್ಯ ನಿಯಂತ್ರಣ ಮಾಸವಾಗಿ ಆಚರಿಸಲಾಗುತ್ತಿದ್ದು,ವಾಯು ಮಾಲಿನ್ಯ ನಿಯಂತ್ರಿಸಲು ಸಾರಿಗೆ ಇಲಾಖೆ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ಸಾರಿಗೆ ನಿಯಂತ್ರಣ ಅಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳು ಮತ್ತು ಅವುಗಳು ಹೊರ ಸೂಸುವ ಹೊಗೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು,ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಅನೇಕ ವಿಧವಾದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ವಾಯುಮಾಲಿನ್ಯ ತಡೆಗೆ ಪ್ರವರ್ತನ ಕಾರ್ಯಗಳನ್ನು ಮತ್ತು ಸಂಬಂಧಿಸಿದ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕಾರ್ಯದಲ್ಲಿ ಇಲಾಖೆ ನಿರತವಾಗಿದ್ದು, ಎಲ್ಲರ ಸಹಕಾರವನ್ನು ಈ ನಿಟ್ಟಿನಲ್ಲಿ ಕೋರಿದೆ. ನವೆಂಬರ್ ತಿಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹೊಗೆ ಉಗುಳುವ ವಾಹನಗಳ ವಿಶೇಷ ತಪಾಸಣೆಯನ್ನು ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಚಾಲಕರು/ಮಾಲಕರು ವಾಯು ಮಾಲಿನ್ಯ ನಿಯಂತ್ರಣ ದೃಢಪತ್ರವನ್ನು ಹೊಂದಿರಬೇಕೆಂದು ಮತ್ತು ತಪಾಸಣಾಧಿಕಾರಿಗಳು ಕೇಳಿದಾಗ ಹಾಜರು ಪಡಿಸಬೇಕೆಂದು ಆರ್ ಟಿ ಒ ವಿನಂತಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಕೆಳಕಂಡ ಪ್ರದೇಶಗಳಲ್ಲಿ ವಾಯುಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ವಾಯು ಮಾಲಿನ್ಯ ತಪಾಸಣೆಯನ್ನು 50% ರಿಯಾಯಿತಿ ಶುಲ್ಕದೊಂದಿಗೆ ನಡೆಸಲಾಗುವುದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ನವೆಂಬರ್ 11ರಂದು ಮಂಗಳೂರಿನ ಎಲ್ಲಾ ವಾಯು ಮಾಲಿನ್ಯ ಪರೀಕ್ಷಣಾ ಕೇಂದ್ರಗಳಲ್ಲಿ, 17ರಂದು ಬಿ.ಸಿ.ರೋಡಿನ ಶ್ರೀ ಧರ್ಮಶಾಸ್ತ್ರ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ,24ರಂದು ವಿಟ್ಲ ಕ್ಯಾಂಪಿನ ನೂಜಿ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ, 25ರಂದು ಮೂಡಬಿದ್ರಿಯ ಪ್ರವೀಣ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ,27ರಂದು ಮತ್ತೆ ಮಂಗಳೂರಿನ ಎಲ್ಲಾ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಪ್ರಮಾಣ ಪತ್ರ ಪಡೆಯಬಹುದಾಗಿದ್ದು, ಎಲ್ಲ ವಾಹನಗಳ ಮಾಲಿಕರು/ಚಾಲಕರು ಈ ಅವಕಾಶದ ಸದ್ಬಳಕೆ ಮಾಡಲು ಕೋರಲಾಗಿದೆ.
ಮಂಗಳೂರು,ನ.2:ಬಹುಮಹಡಿ ಕಟ್ಟಡಗಳನ್ನು ಹೇರಳವಾಗಿ ಹೊಂದಿದ್ದು,ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯ ಅಗ್ನಿಶಾಮಕ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಬೇಕಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಯೋಗೀಶ್ ಭಟ್ ಹೇಳಿದರು. ಅವರು ಇಂದು ಕದ್ರಿಯಲ್ಲಿ 1 ಕೋಟಿ 42 ಲಕ್ಷ ರೂ.ವೆಚ್ಚ ಮಾಡಿ ನಿರ್ಮಿಸಲಾದ ನೂತನ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಗರದ ಪ್ರಮುಖ ಕಟ್ಟಡ ಸಮುಚ್ಛಯಗಳಲ್ಲಿ ಈಗಾಗಲೇ ಅಗ್ನಿ ದುರಂತಗಳಿಗೆ ನಾವು ಸಾಕ್ಷಿಯಾಗಿದ್ದು,ಕ್ಲಪ್ತ ಸಮಯದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಬೆಂಕಿಯೊಡನೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನಲೆಯನ್ನು ಗಮನದಲ್ಲಿರಿಸಿ ಕಟ್ಟಡ ನಿರ್ಮಾಣ ಕಾನೂನು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಐ ಜಿ ಪಿ.ಎಸ್. ಸಂಧು ಅವರು ಮಾತನಾಡಿ, ಅಗ್ನಿಶಾಮಕ ಪಡೆಯ ಸಿಬ್ಬಂದಿಗಳು ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ತೋರುವ ಕಾರ್ಯಕ್ಷಮತೆಯನ್ನು ಕೊಂಡಾಡಿದರು.ಕರ್ನಾಟಕದಲ್ಲಿ 156 ಅಗ್ನಿಶಾಮಕ ಠಾಣೆಗಳಿವೆ. ಇನ್ನು 51 ಠಾಣೆಗಳನ್ನು ತೆರೆಯುವ ನಿಟ್ಟಿನಲ್ಲಿ ಇಲಾಖೆ ಕಾರ್ಯತತ್ಪರವಾಗಿದೆ. ಬಂಟ್ವಾಳ ತಾಲೂಕು ಮಟ್ಟದ ಠಾಣೆಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಇದನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ಜಿಲ್ಲಾಧಿಕಾರಿಗಳ ಪ್ರೋತ್ಸಾಹದಿಂದ ಮಂಗಳೂರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ವಿಪತ್ತು ನಿರ್ವಹಣೆಗೆ ವಿನೂತನ ಟೆಕ್ನಾಲಜಿಯನ್ನು ಅಳವಡಿಸಲು ಮಿಸ್ಟ್ ಟಕ್ನಾಲಜಿ, ವಾಟರ್ ಬ್ರೌಸರ್ ನಂತಹ ಉಪಕರಣಗಳನ್ನು ಖರೀದಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ವೇಳೆ ಪಡೆಯುವ ಅನುಮತಿ ಮತ್ತು ನಂತರ ಅನುಮತಿಯನ್ನು ಮೀರಿ ವಿಸ್ತರಿಸುವ ಕಟ್ಟಡ ಕಾಮಗಾರಿಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುವುದು ತಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಹೊಣೆಗಾರರನ್ನು ನಿಗದಿಪಡಿಸುವ ಕಾರ್ಯವಾಗಬೇಕಿದೆ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ನಾಮಫಲಕ ಅನಾವರಣಗೊಳಿಸಿ,ಬಂಟ್ವಾಳ ತಾಲೂಕಿಗೆ ಅಗ್ನಿಶಾಮಕ ಠಾಣೆ ಬೇಡಿಕೆ ಈಡೇರಿಸಬೇಕೆಂದು ಹೇಳಿದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಪಶ್ಷಿಮ ವಲಯ ಐ ಜಿ ಪಿ ಗೋಪಾಲ್ ಹೊಸೂರ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಕದ್ರಿ ಕಾರ್ಪೊರೇಟರ್ ಜಯಾನಂದ ಅಂಚನ್, ಉಪಸ್ಥಿತರಿದ್ದರು. ಪ್ರಾದೇಶಿಕ ಅಗ್ನಿಶಾಮಕ ಮುಖ್ಯ ಅಧಿಕಾರಿ ವರದರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಗ್ನಿಶಾಮಕ ಅಧಿಕಾರಿ ಬಸವಣ್ಣ ವಂದಿಸಿದರು.
ಮಂಗಳೂರು,ನ.1:ರಾಜ್ಯದ ಅಭಿವೃದ್ಧಿಗೆ ಜನಪರ ಯೋಜನೆಗಳನ್ನು ರೂಪಿಸುವಾಗ ತಾರತಮ್ಯ ಹಾಗೂ ಪಕ್ಷಪಾತಕ್ಕೆ ಅವಕಾಶವಿಲ್ಲ; ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು. ಇಂದು ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಸಚಿವರು, ಜಿಲ್ಲೆಯ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಹಾಗೂ ಬಿಡುಗಡೆ ಮಾಡಿದ ಅನುದಾನದ ಮಾಹಿತಿ ನೀಡಿದರು. ನೆರೆ ಪೀಡಿತರಿಗೆ ನೆರವು ನೀಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು.ವಿಶ್ವತುಳು ಸಮ್ಮೇಳನಕ್ಕೆ ಹಾಗೂ ಈ ಸಂದರ್ಭದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು 21 ಕೋಟಿ ರೂ.ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಸುಂದರ, ಸಂತೃಪ್ತ ನಾಡು ಕಟ್ಟುವ ಸದಾಶಯವನ್ನು ರಾಜ್ಯೋತ್ಸವ ಸಮಾರಂಭದಂದು ವ್ಯಕ್ತಪಡಿಸಿದ ಸಚಿವರು ಕನ್ನಡ ಮಾಧ್ಯಮ ಶಿಕ್ಷಣ ಕ್ಕೆ ಇನ್ನಷ್ಟು ಕಸುವು ತುಂಬುವ ಕಾರ್ಯವಾಗಬೇಕೆಂದರು. ಸಮಾರಂಭದಲ್ಲಿ ಪಥಸಂಚಲನ,ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.