ಮಂಗಳೂರು, ಏ. 27: ಏಪ್ರಿಲ್ 30ರಂದು ನಡೆಯಲಿರುವ ಚುನಾವಣೆಯ 48 ಗಂಟೆ ಮೊದಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳುವಂತೆ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಏಪ್ರಿಲ್ 28ರ ಸಂಜೆ 5 ಗಂಟೆಯಿಂದ ಜಿಲ್ಲೆಯಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮನೆ ಮನೆ ಪ್ರಚಾರಕ್ಕೆ ಅವಕಾಶವಿದ್ದು, 4ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಕ್ಷೇತ್ರದ ಹೊರಗಿನವರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿರ್ಭೀತ ಮತದಾನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 11,500 ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಈಗಾಗಲೇ ಮೂರು ಹಂತದ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ. ಮೈಕ್ರೊ ಅಬ್ಸರ್ವರ್ಸ್ ಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಏ. 29ರಂದು ಚುನಾವಣಾ ವೀಕ್ಷಕರು ಇವರಿಗೆ ಮತ್ತೊಮ್ಮೆ ಮಾರ್ಗದರ್ಶನ ನೀಡಲಿದ್ದಾರೆ.
ನಕ್ಸಲ್್ ಪೀಡಿತ ಪ್ರದೇಶದ 22 ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ಅನುಮತಿಯೊಂದಿಗೆ ಪುರುಷ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 328 ವಿಡಿಯೋಕ್ಯಾಮರಾ ಅಳವಡಿಸಲಾಗಿದ್ದು, 486 ಮೈಕ್ರೋ ಅಬ್ಸರ್ವರ್ಸ್ ಜಾಗೃತರಾಗಿ ಕಾರ್ಯನಿರ್ವಹಿಸಲಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ಹೆಚ್ಚುವರಿ ಸಿಬ್ಬಂದಿ ಸನ್ನದ್ಧರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ದೂರು ಸಲ್ಲಿಸಲು ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 155212ಗೆ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್:
ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲಾಗಿರುವ ಬೆಳ್ತಂಗಡಿಗೆ ಆಂಧ್ರದ ವಿಶೇಷ ಪೊಲೀಸ್ ತಂಡ ಮತ್ತು ಸಿಆರ್ ಪಿ ಎಫ್ ತಂಡವನ್ನು ನಿಯೋಜಿಸಲಾಗಿದೆ. ಉಳ್ಳಾಲ ಮತ್ತು ಬಂಟ್ವಾಳಕ್ಕೆ ಕೇರಳದ ವಿಶೇಷ ಪೊಲೀಸ್ ತಂಡ ನಿಯೋಜಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ.
ಸಂವಹನ ಯೋಜನೆಯಡಿ ಪ್ರತ್ಯೇಕ 8 ಸಂಪರ್ಕ ಜಾಲ ಮತ್ತು ಜಿಲ್ಲಾ ಕೇಂದ್ರದಲ್ಲಿ ಮುಖ್ಯ ಸಂಪರ್ಕ ಜಾಲವನ್ನು ಸ್ಥಾಪಿಸಲಾಗಿದ್ದು, 9886666100 ಎಸ್ ಎಂ ಎಸ್ ಸೇವೆಯನ್ನು ಕಲ್ಪಿಸಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ವಾಹನಗಳನ್ನು ಉಪಯೋಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿಯವರಿಂದ ವಾಹನಗಳನ್ನು ಒದಗಿಸುವಂತೆ ಕೋರಿದ್ದು, ನಿರಾಕರಿಸಿದರೆ ಆರ್ ಪಿ ಎ ಕಾಯ್ದೆಯನ್ವಯ ಕ್ರಮಕೈಗೊಳ್ಳಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮತದಾರರನ್ನು ವಾಹನಗಳಲ್ಲಿ ಕರೆದೊಯ್ಯುವುದು ಪತ್ತೆಯಾದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕುವ ಬಗ್ಗೆಯೂ ಎಚ್ಚರಿಕೆ ನೀಡಲಾಯಿತು.