ಮಂಗಳೂರು, ಏ. 28: ರಾಜ್ಯದ ಮೂರು ಜಿಲ್ಲೆಗಳ ನಕ್ಸಲ್ ಪೀಡಿತ 81 ಹಳ್ಳಿಗಳಲ್ಲಿ ನಿರ್ಬೀತ ಮತದಾನಕ್ಕೆ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಹಾಗೂ ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥ ಗೋಪಾಲ್ ಹೊಸೂರ್ ಹೇಳಿದ್ದಾರೆ.
ನಕ್ಸಲರ ಚಟುವಟಿಕೆ ಇರುವ ದ. ಕ. , ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಎರಡು ಲೋಕಸಭಾ ಕ್ಷೇತ್ರಗಳ 8ತಾಲೂಕುಗಳ 81 ಹಳ್ಳಿಗಳಲ್ಲಿ 162 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದ್ದು, ಹೈಟೆಕ್ ಕ್ಯಾಮರಾಗಳನ್ನುಮತ್ತು ಥರ್ಮಲ್ ಇಮೇಜರಗಳನ್ನು ಅಳವಡಿಸಲಾಗಿದೆ.
ಕಳೆದ ಒಂದು ವಾರದಲ್ಲಿ 35 ನಕ್ಸಲ್ ಬೆಂಬಲಿಗರನ್ನು ಬಂಧಿಸಲಾಗಿದ್ದು, 2002ರಿಂದ ಇಂದಿನವರೆಗೆ 100 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವೈದ್ಯಕೀಯ ತಂಡ ಮತ್ತು ಹೆಚ್ಚುವರಿ ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಹೊಸೂರು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಎಸ್ ಪಿ ಡಾ. ಸುಬ್ರಮಣ್ಯೇಶ್ವರ ರಾವ್, ಎಎಸ್ ಪಿ ಆರ್. ದಿಲೀಪ್, ಡಿವೈಎಸ್ ಪಿ ಹರೀಶ್ಚಂದ್ರ ಉಪಸ್ಥಿತರಿದ್ದರು.