Friday, April 24, 2009

ಸುಗಮ ಮತದಾನಕ್ಕೆ ಸಮಗ್ರ ಸಂಪರ್ಕ ಮಾಹಿತಿ ಕೇಂದ್ರ



ಮಂಗಳೂರು, ಏ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಸುವ್ಯವಸ್ಥಿತವಾಗಿ ನಡೆಯಲು ಸಮಗ್ರ ಚುನಾವಣಾ ಪ್ರಕ್ರಿಯೆ ನಿರ್ವಹಣೆ ವ್ಯವಸ್ಥೆ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸಮಗ್ರ ಸಂಪರ್ಕ ಜಾಲವನ್ನು ರೂಪಿಸಲಾಗಿದ್ದು, ಚುನಾವಣಾ ಪ್ರಕ್ರಿಯೆ ನಿರ್ವಹಣೆ ಸಂಬಂಧ ಸಮಸ್ಯೆಗಳ ನಿವಾರಣೆಗೆ ಆದ್ಯತೆಯನ್ನು ನೀಡಲಾಗುವುದು ಎಂದ ಅವರು, 1,518 ಮತಗಟ್ಟೆಗಳೊಂದಿಗೆ ನೇರಸಂಪರ್ಕವನ್ನು ಇರಿಸಿಕೊಳ್ಳಲಾಗಿದ್ದು, ಸಮಸ್ಯೆಗಳ ತುರ್ತು ಪರಿಹಾರಕ್ಕೆ ಹಾಗೂ ಸಂವಹನಕ್ಕೆ ಕೊರತೆಯಾಗದಂತೆ ಸರ್ವ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಮಾಹಿತಿ ಸಂಪರ್ಕ ಕೇಂದ್ರದಲ್ಲಿ 8ಸ್ಥಿರ ದೂರವಾಣಿ ಲೈನ್, 4 ಮೊಬೈಲ್ ಲೈನ್, ಡಬ್ಲ್ಯು ಎಲ್ ಎಲ್ ಮತ್ತು 2 ಹೆಚ್ಚುವರಿ ಸಂಪರ್ಕಗಳನ್ನು ಹೊಂದಲಾಗಿದ್ದು, ಈ ಸಂಬಂಧ ಬಿ ಎಸ್ ಎನ್ ಎಲ್, ಟಾಟಾ ಇಂಡಿಕಾಮ್ ಮತ್ತು ರಿಲಯನ್ಸ್ ಜೊತೆ ಸಂಪರ್ಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಗಂಟೆಗೊಮ್ಮೆ ಚುನಾವಣಾ ಪ್ರಕ್ರಿಯೆ ಬಗ್ಗೆ ರಾಜ್ಯಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿರುವುದರಿಂದ ಎಸ್ ಎಂ ಎಸ್ ಮಾಹಿತಿ ಮತ್ತು ಫ್ಯಾಕ್ಸ್ ಗಳನ್ನು ಅಳವಡಿಸಲಾಗಿದೆ ಎಂದೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.